ನಮ್ಮ ತೇಜಸ್ವಿ
ಚೇತನ ನೇತ್ರ
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕನ್ನಡ ಸಾಹಿತ್ಯ-ಸಂಸ್ಕೃತಿ ಚಿಂತನೆಯ ಹೊಸ ದಿಗಂತಗಳ ಬಾಗಿಲುಗಳನ್ನು ತೆರೆಸಿದ ಲೇಖಕ. ಕ್ರಿಯಾಶೀಲತೆ ಮತ್ತು ಚಲನಶೀಲತೆ ಅವರ ಸಾಹಿತ್ಯದ ಕೇಂದ್ರ ಆಶಯ. ವ್ಯಕ್ತಿ ವಿಶಿಷ್ಟ ಸಿದ್ಧಾಂತದಿಂದ ಜೀವಕೇಂದ್ರಿತ ಜಗತ್ತಿನ ಶೋಧದ ಕಡೆಗೆ ಅವರ ಸಾಹಿತ್ಯ ವಿಕಾಸವಾಗುತ್ತ ಬೆಳೆಯುತ್ತದೆ. ತಮ್ಮ ಅನುಭವಗಳನ್ನೇ ಕಥನಗಳನ್ನಾಗಿಸಿ, ಅದಕ್ಕೆ ಹೊಸ ವೈಚಾರಿಕತೆ, ದಾರ್ಶನಿಕತೆ ಹಾಗೂ ಉಜ್ವಲ ಕಾಂತಿಯನ್ನು ದೊರಕಿಸಿಕೊಟ್ಟ ಕನ್ನಡದ ಅಪರೂಪದ ಲೇಖಕ ತೇಜಸ್ವಿ.
ಅಂತೆಯೇ ಅವರ ಬದುಕು ಸರಳ ಹಾಗೂ ನೇರ ವ್ಯಕ್ತಿತ್ವದಿಂದ ಕೂಡಿದ್ದಾಗಿತ್ತು. ಹಾಗಾಗಿಯೇ ಇವರ ಬರಹ, ಆಸಕ್ತಿ ಹಾಗೂ ಬದುಕಿನ ರೀತಿಗೆ ಮನಸೋತು, ಆಕರ್ಷಿತರಾಗಿ ಅವರಂತೆ ಬದುಕಬೇಕು ಎಂದು ಹಂಬಲಿಸಿದವರು ಅಸಂಖ್ಯ.
20ನೇ ಶತಮಾನದ ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ಲೇಖಕರಲ್ಲಿ ಒಬ್ಬರಾಗಿದ್ದ ತೇಜಸ್ವಿ ಬದುಕಿದ್ದು ಕೇವಲ ಅರವತ್ತೊಂಭತ್ತು ವರ್ಷಗಳು ಮಾತ್ರ. ಅವರ ಸಾವು ಅವರ ಸಾಹಿತ್ಯ ಪ್ರೇಮಿಗಳನ್ನು ಕೊರಗಿನಲ್ಲಿ ಇಟ್ಟಿದೆ. ಅವರ ಬದುಕು, ಸಾಹಿತ್ಯ ಕೃಷಿ ನಿರಂತರವಾಗಿ ನಮ್ಮ ಬದುಕಿನ ಭಾಗವಾಗುತ್ತಿದೆ.
ಅವರ ಸಾಹಿತ್ಯದ ಅಭಿವ್ಯಕ್ತಿ ವಿಧಾನ, ಸ್ವರೂಪ, ಕಥನಕ್ರಮ, ಭಾಷೆಯ ಬಳಕೆ, ಹೊಸ ನುಡಿಗಟ್ಟುಗಳ ಶೋಧ ತಮ್ಮ ಎಲ್ಲ ಬರಹಗಳಲ್ಲಿ ನಿರಂತರವಾಗಿ ಅನ್ವೇಷಣೆಗೆ ಒಳಪಟ್ಟಿದ್ದವು ಎಂಬುದಕ್ಕೆ ಅವರ ಅಗಾಧ ಕೃತಿಗಳೇ ಸಾಕ್ಷಿಯಾಗಿವೆ. ಅನುವಾದ, ಚಿತ್ರಕಲೆ, ಫೋಟೋಗ್ರಫಿ, ಸಿತಾರ್ ವಾದನ , ಸಂಗೀತ ಆಸ್ವಾದನೆ, ಮೀನು ಶಿಕಾರಿ, ಬೇಟೆ, ಪಕ್ಷಿ ವೀಕ್ಷಣೆ, ಕೃಷಿ, ಯಂತ್ರ ರಿಪೇರಿ, ಚಾರಣ, ಕಂಪ್ಯೂಟರ್ ಬಗೆಗಿನ ಕುತೂಹಲ ಹಾಗೂ ಅದರ ಬಳಕೆಯ ಸಾಧ್ಯತೆಗಳು, ಅಡುಗೆ ಹೀಗೆ ಹತ್ತು ಹಲವು ಇವರ ಆಸಕ್ತಿ, ಅಭಿರುಚಿ, ಕುತೂಹಲಗಳಾಗಿದ್ದವು. ಹಾಗಾಗಿ ತೇಜಸ್ವಿ ಎಂದರೇನೆ ಒಂದು ವಿಸ್ಮಯ, ನಿಗೂಢ.
ಪ್ರಾರ್ಥನೆಯ ಶಿಶು
“ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ;”
* * *
ಸಂದವರ ಪುಣ್ಯವೋ? ಬಂದವನ ಪುಣ್ಯವೋ?
ತಂದೆ ತಾಯಿಯರ ಪುಣ್ಯವಿದೊ, ಗುರುವೆ?
ನನ್ನ ಕೈ ಹಿಡಿದಾಕೆಯಾ ಬಿನ್ನ ಪದ ಹಣ್ಣೊ?
ಇನ್ನೇನು ಕಾರಣವೊ ಕಾಣೆ, ಓ ಗುರುವೆ!
ತೇಜಸ್ವಿ ಅವರ ಜನನದ ಸಂದರ್ಭದಲ್ಲಿ ತಂದೆ ಕುವೆಂಪು ಅವರ ನಿವೇದನೆ ಇದು. ಅಂದು ವಿದ್ಯೆ ಕೀರ್ತಿಗಳು ಒಂದುಗೂಡಿದ ಅಂದದೊಳು ಈ ಲೋಕಕ್ಕೆ ಪೂರ್ಣಚಂದ್ರ ಉದಯಿಸಿದ್ದಾನೆ. ಎಂದು ನುಡಿದಿದ್ದರು. ಆ ನಿವೇದನೆ ಇಂದು ಸಾಕಾರಗೊಂಡಿದೆ. ತಂದೆ ತಾಯಿಗಳ ಅಂದಿನ ಬಿನ್ನಪಕ್ಕೆ ಸಂದ, ವಿಶ್ವವೆಲ್ಲ ಸೇರಿ ವಿಶ್ವಾಸದಲಿ ಕೋರಿ ಪಡೆದ ಚಂದ ಕಂದಾ ಪೂರ್ಣಚಂದ್ರ ತೇಜಸ್ವಿ ಅವರ ಕೀರ್ತಿ ಜಗಕೆಲ್ಲ ಹಬ್ಬಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ತಂದೆ ಕೆ.ವಿ.ಪುಟ್ಟಪ್ಪ. ತಾಯಿ ತೀರ್ಥಹಳ್ಳಿ ತಾಲ್ಲೂಕಿನ ದೇವಂಗಿ ಗ್ರಾಮದ ಶ್ರೀ ರಾಮಣ್ಣ ಗೌಡರ ಮಗಳು ಡಿ.ಆರ್. ಹೇಮಾವತಿ. ತೇಜಸ್ವಿ ಅವರ ತಾಯಿಯ ತವರು ಶ್ರೀಮಂತ, ನೆಮ್ಮದಿಯ ಮನೆ. ತೇಜಸ್ವಿ ಅವರ ತಂದೆ ಕುವೆಂಪು ಎಂದೇ ಪ್ರಸಿದ್ಧರು. ಕುವೆಂಪು ಅಂದರೆ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ. ಕನ್ನಡ ಸಾಹಿತ್ಯ ಕಂಡ ಮಹತ್ವದ, ಅಪರೂಪದ ಲೇಖಕರು. ಒಂದು ಶತಮಾನ ಕಾಲ ಇವರ ಬದುಕು ಸಾಹಿತ್ಯ ಕನ್ನಡ ಸಂಸ್ಕೃತಿಯ ಮೇಲೆ ನಿಚ್ಛಳ ಪ್ರಭಾವ ಬೀರಿವೆ.
ತೇಜಸ್ವಿ ಅವರ ತಂದೆ ತಾಯಿ ಹುಟ್ಟಿದ್ದು, ಬೆಳೆದದ್ದು ಮಲೆನಾಡಿನ ದಟ್ಟ ಅರಣ್ಯಗಳ ನಡುವಿನ ಒಂಟಿ ಮನೆಗಳಲ್ಲಿ. ತಾಯಿ ತಂದೆಯರ ಪರಿಸರ ದಟ್ಟ ಕಾಡು, ಪರ್ವತ ಸಾಲುಗಳು, ಅಡಿಕೆಯ ತೋಟಗಳು, ಭತ್ತದ ಗದ್ದೆಗಳು, ನೀರಿನ ಒರತೆಗಳು, ತುಂಗಾ ನದಿ ಹೀಗೆ ನಿಸರ್ಗ ಸಮೃದ್ಧವಾದುದು. ಇಲ್ಲಿಯ ಕವಿಶೈಲ, ಸಿಬ್ಬಲುಗುಡ್ಡೆ, ನವಿಲುಕಲ್ಲು ಗುಡ್ಡ ಇತ್ಯಾದಿ ನಿಸರ್ಗ ಚೆಲುವಿನ ತಾಣಗಳು ಮೋಹಕ. ಅಲ್ಲಿಂದ ಕಾಣುವ ಚಂದ್ರೋದಯ,ಸೂರ್ಯೋದಯ, ಸೂರ್ಯಾಸ್ತಮಗಳು ನಂದನವನವನ್ನು ನೆನಪಿಸುತ್ತವೆ. ಕಡಲುಗಳಂತೆ ಕಾಣುವ ದೃಶ್ಯ ವೈಭವ, ಇಬ್ಬನಿಯ ಮಳೆಯ ಆರ್ಭಟ, ಸಿಡಿಲು ಗುಡುಗುಗಳ ಭೀಕರತೆಗಳನ್ನು ಕಂಡುಂಡು ಬೆಳೆದ ಇಪ್ಪತ್ತನೆಯ ಶತಮಾನದ ಮಹಾಕವಿ ಕುವೆಂಪು. ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶೆ , ಮೀಮಾಂಸೆ, ಆತ್ಮಕಥೆ, ಜೀವನಚರಿತ್ರೆಕಾರರಾಗಿ ಉತ್ಕೃಷ್ಟ ಕೃತಿಗಳನ್ನು ರಚಿಸಿದ್ದಾರೆ.
ತೇಜಸ್ವಿ ಅವರ ತಂದೆ ಕುವೆಂಪು ಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದವರು. ಆ ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಅವಿರತವಾಗಿ ಶ್ರಮಿಸಿದ ಕೀರ್ತಿಯೂ ಅವರದಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ಪುರಸ್ಕಾರಗಳನ್ನು, ಗೌರವ ಡಾಕ್ಟರೇಟ್ ಪದವಿಗಳನ್ನು ಕೊಟ್ಟು ಜನತೆ ಅವರನ್ನು ಗೌರವಿಸಿದೆ. ಭಾರತದಲ್ಲಿ ಸಾಹಿತ್ಯಕ್ಕೆ ಕೊಡಮಾಡುವ ಉನ್ನತ ಗೌರವ ಪುರಸ್ಕಾರಗಳಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಹಾಗೂ ಜ್ಞಾನಪೀಠ ಪುರಸ್ಕಾರಗಳನ್ನು ಪಡೆದ ಮೊದಲ ಕನ್ನಡಿಗರೂ ಆಗಿದ್ದಾರೆ.
ಇಂಥ ದಾರ್ಶನಿಕರ, ಚಿಂತಕರ ಹಿರಿಯ ಮಗನಾಗಿ ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ೧೯೩೮ ಸೆಪ್ಟೆಂಬರ್ ೮ರಂದು ಹುಟ್ಟಿದರು. ಇವರು ಹುಟ್ಟಿದ್ದು ತಮ್ಮ ತಾಯಿಯ ತವರು ಮನೆಗಳಲ್ಲಿ ಒಂದಾದ ಶಿವಮೊಗ್ಗದಲ್ಲಿರುವ ಶ್ರೀ ದೇವಂಗಿ ರಾಮಣ್ಣಗೌಡರ ಮನೆಯಲ್ಲಿ. ಅನಂತರ ಇವರ ತಮ್ಮ ಕೋಕಿಲೋದಯ ಚೈತ್ರ, ತಂಗಿಯರಾದ ಇಂದುಕಲಾ, ತಾರಿಣಿಯವರು ಒಡಹುಟ್ಟಿದವರು.
…. ಗುರು ನಿನ್ನ
ಕೃಪೆ ನನ್ನ ಸತಿಸುತರ ಮೇಣೆನ್ನ ಮೇಲಿರಲಿ
ನಿನ್ನ ಮಹಿಮೆಯೊಳೆಮಗೆ. ಪ್ರೇಮಾಂಗಿನಿಯ ನನ್ನ
ಕುವರನಾಗಲಿ ಪೂರ್ಣಚಂದ್ರಸಮ ತೇಜಸ್ವಿ:
ಕಾಂತಿ ಶಾಂತಿಯನಿತ್ತು ನಲಿಸುವ ರಸ ತಪಸ್ವಿ!
ಎಂದು ತಂದೆ ಕವಿ ಕುವೆಂಪು ಅವರು ಇನ್ನೂ ತೇಜಸ್ವಿ ತಾಯಿಯ ಗರ್ಭದಲ್ಲಿರುವಾಗಲೇ ‘ಕುಮಾರ ಸಂಭವ’ವನ್ನು ಕೇಳಿದ ಕವಿಯ ಸ್ವಾಗತವಿದು.
ಸ್ವಾಗತ ನಿನಗೆಲೆ ಕಂದಯ್ಯ
ನಮ್ಮದ ಬಾನಿನ ಚಂದಯ್ಯ!
ಸುಂದರ ಪೃಥ್ವಿಗೆ ಸ್ವಾಗತವಯ್ಯ,
ಪುಣ್ಯಭಾರತಕೆ ಸ್ವಾಗತವಯ್ಯ,
ನನ್ನ ಕನ್ನಡಕೆ ಸ್ವಾಗತವಯ್ಯ,
ಗುರುದೇವ ಕೃಪಾ ಓಜಸ್ವಿ!
”ವಿದ್ಯೆಕೀರ್ತಿಗಳೊಂದುಗೂಡಿದ ಅಂದದೊಳಿಂದು ಲೋಕಕ್ಕೆ ತಂದಿಹನು ಪೂರ್ಣ – ಇಂದು!” ಎಂದೂ ”ತೇಜಸ್ವಿ; ಬರಿಯ ತನುಜಾತನಲ್ಲ ಹುದಾತ್ಮಜಾತನುಂ” ಎಂದು ಕವಿ ತಂದೆ ಕುವೆಂಪು ತೇಜಸ್ವಿ ಅವರ ಆಗಮನವನ್ನು ಸ್ವಾಗತಿಸುತ್ತಾರೆ.
ವಿದ್ಯಾಭ್ಯಾಸ
ತೇಜಸ್ವಿಯವರ ವಿದ್ಯಾಭ್ಯಾಸ ‘ಉದಯರವಿ’ಯಲ್ಲಿ ಅಪ್ಪ-ಅಮ್ಮನಿಂದಲೇ ಆರಂಭವಾಯಿತು. ಅನಂತರ ತಂದೆ ಕುವೆಂಪು ಅವರು ಮೈಸೂರಿನ ಪಡುವಾರಹಳ್ಳಿ, ಒಂಟಿಕೊಪ್ಪಲು ಹಳ್ಳಿಯ ಏಕೋಪಾಧ್ಯಾಯ ಸಾರ್ವಜನಿಕ ಶಾಲೆಗೆ ತೇಜಸ್ವಿ ಮತ್ತು ಅವರ ತಮ್ಮ ಕೋಕಿಲೋದಯ ಚೈತ್ರರನ್ನು ಕರೆದುಕೊಂಡು ಹೋಗಿ ಸೇರಿಸಿದರಂತೆ. ಇದು ಅವರು ಮೊದಲು ಹೆಜ್ಜೆ ಇಟ್ಟ ಶಾಲೆ. ಅಲ್ಲಿನ ಕೊಳಕು ಪರಿಸರಕ್ಕೆ ಹೆದರಿ ಶಾಲೆಗೆ ಸೇರಿದ ದಿನವೇ ಅವರು ಸ್ಕೂಲಿನಿಂದ ಪರಾರಿಯಾದರಂತೆ. ಅಂದು ತಮ್ಮನ್ನು ಶಾಲೆಗೆ ಸೇರಿಸಲು ಬಂದ ತಮ್ಮ ತಂದೆಗಿಂತ ಮೊದಲೇ ಮನೆ ಸೇರಿದರಂತೆ. ಹೀಗಾಗಿ ಸ್ವಲ್ಪಕಾಲ ನಂಜುಂಡಯ್ಯ ಎನ್ನುವವರಿಂದ ಮನೆಯಲ್ಲಿಯೇ ಶಾಲೆಯ ಆರಂಭ. ಅನಂತರ ಮನೆಯ ಹತ್ತಿರ ಇದ್ದ ಶಿಶುವಿಹಾರದಲ್ಲಿ ಇವರ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾಭ್ಯಾಸವು ನಡೆಯಿತು.
ಹೈಸ್ಕೂಲು ಮತ್ತು ಕಾಲೇಜು ವಿದ್ಯಾಭ್ಯಾಸ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಮತ್ತು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಿತು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದರು.
ಪ್ರಭಾವ
ತಂದೆ ಅವರ ನಿಸರ್ಗ ಹಾಗೂ ಜೀವನ ಪ್ರೀತಿ, ಸಹಜ-ಸರಳವಾದ ಬದುಕು ತೇಜಸ್ವಿ ಅವರ ಬಾಲ್ಯದ ಮೇಲೆ ಗಾಢ ಪ್ರಭಾವ ಬೀರಿತ್ತು. ತೇಜಸ್ವಿ ಅವರೇ ಹೇಳುವಂತೆ “ಪ್ರಕೃತಿ ಮತ್ತು ಪರಿಸರದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯ ಕಾರಣ ನಮ್ಮ ತಂದೆಯವರೇ.”ಪ್ರಕೃತಿ-ಪರಿಸರದ ಬಗ್ಗೆ ತಮ್ಮ ತಂದೆ ಹೇಳುತ್ತಿದ್ದ ಬಾಲ್ಯದ, ತಾರುಣ್ಯದ ಕುಪ್ಪಳಿಯ ಮಲೆನಾಡಿನ ಅನುಭವಗಳು, ವ್ಯಾಖ್ಯಾನಗಳು, ವಿವರಣೆಗಳು ತೇಜಸ್ವಿ ಅವರನ್ನು ಗಾಢವಾಗಿ ಪ್ರಭಾವಿಸಿವೆ. “ಕುವೆಂಪು ಅವರ ಪರಿಸರ ಆಸಕ್ತಿಯ ಪರಿಣಾಮವಾಗಿಯೇ ನಮಗೂ ಆಸಕ್ತಿ ಉಂಟಾಯ್ತು. ನನಗಂತೂ ಈ ಆಸಕ್ತಿ ಎಷ್ಟಾಯ್ತೆಂದರೆ ಓದು ಬರಹ, ವಿದ್ಯಾಭ್ಯಾಸಗಳಲ್ಲಿ ಆಸಕ್ತಿ ಕಡಿಮೆಯಾಯ್ತು. ಫಸ್ಟ್ ಕ್ಲಾಸ್ಗಳನ್ನಾಗಲೀ, ರ್ಯಾಂಕುಗಳನ್ನಾಗಲೀ ತೆಗೆದುಕೊಳ್ಳಲು ನನ್ನಿಂದ ಕೊನೆವರೆಗೂ ಸಾಧ್ಯವಾಗಲಿಲ್ಲ” ಎನ್ನುತ್ತಾರೆ ತೇಜಸ್ವಿ. ತಂದೆಯವರಾದ ಕುವೆಂಪು ಅವರು ಇಂಥ ಸಮೃದ್ಧಿ, ರೋಮಾಂಚಕ ಪ್ರಪಂಚದ ಮಲೆನಾಡನ್ನು ಬಿಟ್ಟು ಮೈಸೂರಿಗೆ ಏಕಾದರೂ ಪಾಠ ಹೇಳಲು ಬಂದರೊ ಎಂದು ತೇಜಸ್ವಿ ವ್ಯಥೆಪಡುತ್ತಿದ್ದರಂತೆ. ಇಂಥ ಬಾಲ್ಯಕಾಲದ ಅನುಭವ, ಕುತೂಹಲಗಳೇ ತಮ್ಮ ಎಂ.ಎ. ವಿದ್ಯಾಭ್ಯಾಸದನಂತರ “ಯಾರ ಹಂಗು, ಭಯ, ಬೈಯ್ಗುಳಗಳ ಕಾಟವಿಲ್ಲದೆ ಕಾಡು ಮೇಡು ಅಲೆದುಕೊಂಡು ಇರಬಹುದೆಂಬ” ಕಾರಣಕ್ಕಾಗಿಯೇ ವ್ಯವಸಾಯಗಾರನಾಗಿ ಹಳ್ಳಿಗೆ ಬರಬೇಕಾಯ್ತು ಎಂಬುದು ಖುದ್ದು ತೇಜಸ್ವಿಯವರೇ ಹೇಳುತಿದ್ದ ಮಾತು.
ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ಸಮಾಜವಾದಿ ಚಿಂತನೆಗಳಿಂದ ಪ್ರೇರಣೆ ಪಡೆದ ಗೆಳೆಯರಾದ ಪಿ.ಲಂಕೇಶ್, ಪ್ರೊ.ನಂಜುಂಡಸ್ವಾಮಿ, ಕಡಿದಾಳು ಶಾಮಣ್ಣ, ಎನ್.ಡಿ. ಸುಂದರೇಶ್, ಬಿ.ಎನ್. ಶ್ರೀರಾಂ, ಚಂಪಾ, ಕೆ.ರಾಮದಾಸ, ಸಿದ್ಧಲಿಂಗ ಪಟ್ಟಣಶೆಟ್ಟಿ ಮೊದಲಾದ ಗೆಳೆಯರೊಡಗೂಡಿ ನಡೆಸಿದ ಸಾಮಾಜಿಕ-ಸಾಂಸ್ಕೃತಿಕ ಚಳುವಳಿಗಳು ಇಂದಿಗೂ ಅನುಕರಣೀಯವಾಗಿವೆ. ಜಾತಿ ವಿನಾಶ ಸಮ್ಮೇಳನ, ಲೋಹಿಯಾ ಸಮಾಜವಾದಿ ಪಕ್ಷ, ಯುವಜನ ಸಭಾ, ನವನಿರ್ಮಾಣ ಸಮಿತಿ, ಲೋಹಿಯಾ ವಿಚಾರ ಮಂಚ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ರಚನೆ, ರೈತ ಚಳವಳಿ ಹಾಗೂ ಪರಿಸರ ಚಳವಳಿಗಳಲ್ಲಿ ತೇಜಸ್ವಿ ಅವರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇಂಥ ಕ್ರಿಯಾಶೀಲತೆ ಅವರ ಸಾಹಿತ್ಯದ ಮತ್ತು ಬದುಕಿನ ಮೇಲೆ ನಿಚ್ಚಲ ಪ್ರಭಾವ ಬೀರಿದೆ. ಕನರ್ಾಟಕದ ಹಲವಾರು ಪ್ರಗತಿಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಮಂತ್ರ ಮಾಂಗಲ್ಯ
ತೇಜಸ್ವಿಯವರಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದಲ್ಲಿ ಎಂ.ಎ. ಓದುತ್ತಿದ್ದ ಕುಮಾರಿ ರಾಜೇಶ್ವರಿ ಅವರ ಸ್ನೇಹವಾಯಿತು. ರಾಜೇಶ್ವರಿ ಅವರ ಸ್ವಭಾವ-ವ್ಯಕ್ತಿತ್ವದಿಂದ ಆಕಷರ್ಿತರಾದ ತೇಜಸ್ವಿ ಅವರು ತಮ್ಮ ತಂದೆಯವರೇ ಶೋಧಿಸಿದ ‘ಮಂತ್ರ ಮಾಂಗಲ್ಯ’ ಎಂಬ ಸರಳ ವಿವಾಹ ಪದ್ಧತಿಯಂತೆ ಮದುವೆಯಾದರು.
ಅರವತ್ತರ ದಶಕದಲ್ಲಿ ಕುವೆಂಪು ಅವರು ಯುವ ಸಮುದಾಯಕ್ಕೆ ‘ಮಂತ್ರ ಮಾಂಗಲ್ಯ’ ಎಂಬ ಸರಳ ವಿವಾಹಕ್ಕೆ ಕರೆಕೊಟ್ಟರು. ಸನಾತನ ಸಂಪ್ರದಾಯಗಳಿಗೂ, ಗೊಡ್ಡು ಕಂದಾಚಾರಗಳಿಗೂ ಯುವಕರು ಶರಣಾಗದೆ ತಮ್ಮ ಜೀವನದಲ್ಲಿ ‘ಸರಳ ವಿವಾಹ’ವಾಗುವಂಥ ಸಣ್ಣ ಸುಧಾರಣೆಗಳನ್ನು ಮಾಡಿಕೊಳ್ಳಿ. ಇದರಿಂದ ನಿಮ್ಮ ಜೀವನದಲ್ಲಿ ನೀವು ನಂಬಿದ ಆದರ್ಶಗಳ ಮೌಲ್ಯಗಳ ಪರವಾಗಿ ನಿಂತು ಗೊಡ್ಡು ಸಂಪ್ರದಾಯಗಳನ್ನು ಎದುರಿಸಿ ಎಂದರು. “ನಾವು ನಂಬಿದ ಆದರ್ಶಗಳ ಪರವಾಗಿ ನಿಲ್ಲುವ ಅದ್ಭುತ ಅನುಭವ, ಆನಂದ ಏನೆಂದಾದರೂ ನಿಮಗೆ ಗೊತ್ತಾಗುತ್ತದೆ. ಆದರ್ಶಗಳು ನಾವು ದಿನಾ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು” ಎಂದು ಹೇಳಿದರು.
ಇಂಥ ಮಹತ್ವಾಕಾಂಕ್ಷೆಯ ಸರಳ ಮದುವೆಯನ್ನು ಮೊದಲು ಮಾಡಿಕೊಂಡವರೆಂದರೆ ತೇಜಸ್ವಿ ಅವರು. ಇವರ ಮದುವೆ ೧೯೬೬ ನವೆಂಬರ್ ೨೭ ರಂದು ಶ್ರೀ ಬಿ.ವಿ.ರಂಗಪ್ಪ ಮತ್ತು ಶ್ರೀಮತಿ ಆರ್.ರಾಮಕ್ಕ ದಂಪತಿಗಳ ತೃತೀಯ ಪುತ್ರಿ ಕುಮಾರಿ ರಾಜೇಶ್ವರಿ ಅವರೊಂದಿಗೆ ನೆರವೇರಿತು. ನಗರದಿಂದ ದೂರ ಜನ್ನಾಪುರ ತಾಲ್ಲೂಕಿನಲ್ಲಿ ಆಗತಾನೆ ಕಾಡು ಕೊಂಡು ಕೃಷಿಯಲ್ಲಿ ತೊಡಗಿದ್ದ ತೇಜಸ್ವಿ ಅವರ “ಚಿತ್ರಕೂಟ” ತೋಟದಲ್ಲಿ ಇವರ ಆದರ್ಶ ಮದುವೆ ನಡೆಯಿತು. ಕುಟುಂಬದವರು, ಸ್ನೇಹಿತರು, ನೆಂಟರು ಹಾಗೂ ಸಹಾಯಕರು ಸೇರಿ ಕೇವಲ ೩೬ ಜನರು ಈ ಮದುವೆಗೆ ಸೇರಿದ್ದರಂತೆ. ಸ್ವತಃ ಕುವೆಂಪು ಅವರೇ ಸೀತಾರಾಮ, ಶ್ರೀ ರಾಮಕೃಷ್ಣ, ಶ್ರೀ ಶಾರದಾದೇವಿಯ ದೊಡ್ಡ ಭಾವಚಿತ್ರಗಳನ್ನು ಅಲಂಕರಿಸಿದ್ದ ವೇದಿಕೆಯಲ್ಲಿ ಮದುವೆಯ ಪೌರೋಹಿತ್ಯ ವಹಿಸಿ ‘ಮಂತ್ರ ಮಾಂಗಲ್ಯ’ವನ್ನು ನೆರವೇರಿಸಿದರಂತೆ. ತೇಜಸ್ವಿ ಅವರು ಇಂಥ ಮದುವೆಯಿಂದ ತಮ್ಮ ತಂದೆಯವರ ಧ್ಯೇಯ ಧೋರಣೆಗಳನ್ನು ಸಾಕಾರಗೊಳಿಸಿದ್ದು ಮಾತ್ರವಲ್ಲ, ಸನಾತನ ಸಾಂಪ್ರದಾಯಿಕ ಮದುವೆಯ ಪದ್ಧತಿಗೆ ಮುಖಾಮುಖಿಯಾದದ್ದು ಭಾರತೀಯ ಸಾಂಸ್ಕೃತಿಕ ಚರಿತ್ರೆಯಲ್ಲಿ ಒಂದು ಹೆಗ್ಗುರುತಾಗಿದೆ.
ಮದುವೆಯ ನಂತರ ಕೃಷಿಯಲ್ಲಿ ತೊಡಗಿದ ಶ್ರೀ ಪೂರ್ಣಚಂದ್ರ ತೇಜಸ್ವಿ-ಶ್ರೀಮತಿ ರಾಜೇಶ್ವರಿ ದಂಪತಿಗಳಿಗೆ ಕುಮಾರಿ ಸುಸ್ಮಿತಾ ಮತ್ತು ಕುಮಾರಿ ಈಶಾನ್ಯೆ ಎಂಬ ಇಬ್ಬರು ಮಕ್ಕಳಾದರು. ಇಬ್ಬರು ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸ ಮೂಡಿಗೆರೆಯ ಕನ್ನಡ ಮಾಧ್ಯಮದ ಶಾಲೆಯಲ್ಲಿ, ಮಾಧ್ಯಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಇವರಿಬ್ಬರೂ ಮೈಸೂರಿನಲ್ಲಿ ಸಾಫ್ಟ್ವೇರ್ ತಂತ್ರಜ್ಞಾನದಲ್ಲಿ ಇಂಜಿನಿಯರ್ ಪದವಿಯನ್ನು ಪಡೆದರು. ಈಗ ಈ ಮಕ್ಕಳಿಬ್ಬರೂ ಸಾಫ್ಟ್ವೇರ್ ಇಂಜಿನಿಯರುಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ತಮ್ಮದೇ ಆಯ್ಕೆಯ ಹುಡುಗರೊಂದಿಗೆ ಅಂತರಜಾತಿ ವಿವಾಹವಾಗಿದ್ದಾರೆ. ಈಗ ತಮ್ಮ ಜೀವನ ಸಂಗಾತಿಗಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೊದಲನೆ ಮಗಳು ಸುಸ್ಮಿತಾಗೆ ‘ಆರ್ಣ’ ಎಂಬ ಮಗಳು, ಎರಡನೆಯ ಮಗಳು ಈಶಾನ್ಯೆಗೆ ‘ವಿಹಾ’ ಮತ್ತು ‘ಇರಾ’ ಎಂಬ ಮುದ್ದಾದ ಮಕ್ಕಳಿದ್ದಾರೆ. ಇವರಿಂದಾಗಿ ತೇಜಸ್ವಿ ‘ಅಜ್ಜಯ್ಯ’ನ ಪಟ್ಟವನ್ನು ಅಲಂಕರಿಸಿದ್ದಾರೆ.
ಹವ್ಯಾಸಗಳು
ತೇಜಸ್ವಿ ಅವರ ಹವ್ಯಾಸಗಳು ಹತ್ತು ಹಲವು. ಈ ಹವ್ಯಾಸಗಳಲ್ಲಿ ಸಂಗೀತಾಭ್ಯಾಸ, ಶಿಕಾರಿ, ಮೀನು ಶಿಕಾರಿ, ಫೋಟೋಗ್ರಫಿ ಮುಖ್ಯವಾದವುಗಳು. ವಿದ್ಯಾಭ್ಯಾಸದ ಅನಂತರ ತೋಟ ಮಾಡಲು ಆರಂಭಿಸಿದ ಮೊದಲ ವರ್ಷಗಳಲ್ಲಿ ಕ್ಯಾಮೆರಾ, ಕೋವಿ, ಗಾಳಗಳನ್ನು ಹೆಗಲ ಮೇಲೆ ಹಾಕಿಕೊಂಡು ದಿನವಿಡೀ ಅವುಗಳೊಡನೆ ಕಾಡು ಅಲೆಯುವುದೇ ತೇಜಸ್ವಿ ಅವರ ಕೆಲಸವಾಗಿತ್ತಂತೆ. ಇದರ ನಡುವೆ ಅಧ್ಯಯನ, ಬರವಣಿಗೆಗಳಲ್ಲಿ ತೊಡಗುತ್ತಿದ್ದರು. ನಿರ್ಜನ ಕಾಡುಗಳಲ್ಲಿ, ಹಳ್ಳ, ಕೆರೆ, ನದಿಗಳ ದಡಗಳಲ್ಲಿ ಗೊತ್ತು-ಗುರಿಯಿಲ್ಲದೆ ಅಲೆಯುತ್ತಿದ್ದರಂತೆ. ಇಂಥ ಸಾಹಸಗಳಲ್ಲಿ ತೊಡಗಿದ್ದ ತೇಜಸ್ವಿ ಅವರನ್ನು ಕಂಡ ಅನೇಕರು “ಸಂಪೂರ್ಣ ಹಾಳಾದನೆಂದು ವ್ಯಸನಪಡುತ್ತಿದ್ದರಂತೆ. ಅಂಥವರ ಎಲ್ಲ ದೂಷಣೆಗಳಿಗೂ ಉತ್ತರವಾಗಿ ಕನ್ನಡದ ದೈತ್ಯ ಪ್ರತಿಭೆಯಾಗಿ, ಸಂವೇದನಾಶೀಲ ಚಿಂತಕರಾಗಿ ಬೆಳೆದು ನಿಂತವರು ತೇಜಸ್ವಿ. ಅವರ ಈ ಎಲ್ಲ ಹವ್ಯಾಸಗಳ ಮುಖೇನ ಪಡೆದ ಜೀವನಾನುಭವಗಳು ನಮ್ಮ ನಾಡಿನ ಸಾಂಸ್ಕೃತಿಕ ಕೊಡುಗೆಗಳಾಗಿ ಕಲಾಸೃಷ್ಟಿಗಳಾಗಿ ಮೈಪಡೆದಿವೆ. ಅವರು ಮಾಡಿದ ಶಿಕಾರಿ ಅಂದೇ ಅಡಿಗೆ ಆಗಿರಬಹುದು. ಆದರೆ ಆ ಜೀವನಾನುಭವದಿಂದ ಮೈಪಡೆದಿರುವ ಕವರ್ಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕ, ಪರಿಸರ ಕಥೆಗಳು ನಮ್ಮ ಸಂಪತ್ತುಗಳಾಗಿ ಉಳಿದಿವೆ. ಅವರು ತೆಗೆದಿರುವ ಹಕ್ಕಿಗಳ ಚಿತ್ರಗಳು ಮತ್ತೊಂದು ಸುಪ್ರಸಿದ್ಧ ಕಲಾಕೃತಿಗಳಾಗಿ ಜನಮನ್ನಣೆಗೆ ಪಾತ್ರವಾಗಿವೆ.
ತೇಜಸ್ವಿ, ಅವರು ಹೈಸ್ಕೂಲು ವಿಧ್ಯಾರ್ಥಿಯಾಗಿದ್ದಾಗಲೇ ಫೋಟೋಗ್ರಫಿ ಮಂತ್ರಜಾಲಕ್ಕೆ ಒಳಗಾದರು.ಅವರ ಫೋಟೋಗ್ರಫಿಯ ಮೊದಲ ಮಾಡಲ್ ಆದದ್ದು ತಂದೆ ಕುವೆಂಪು ಅವರೇ. ತೇಜಸ್ವಿ ಅವರು ಯಾವ್ಯಾವುದಕ್ಕೋ ತಮ್ಮ ತಂದೆಯಿಂದ ಕೇಳಿ ಪಡೆದುಕೊಂಡ ಹಣದಲ್ಲಿ ಫಿಲಂ ತಂದು ಫೋಟೋ ತೆಗೆಯುತ್ತಿದ್ದರಂತೆ. ತಮ್ಮ ಬಾಲ್ಯ ಹಾಗೂ ತಾರುಣ್ಯದಲ್ಲಿ ತೆಗೆದ ಫೋಟೋಗಳಲ್ಲಿ ಹೆಚ್ಚಿನವು ಕುವೆಂಪು ಅವರದೇ ಎನ್ನುತ್ತಾರೆ ತೇಜಸ್ವಿ. ತೇಜಸ್ವಿ ಅವರು ಮೊದಲು ಕೊಂಡ ಕ್ಯಾಮರಾ ಹದಿನೆಂಟು ರೂಪಾಯಿಗಳ ಕೊಡಕ್ ಬೇಬಿ ಬ್ರೌನಿ. ಹೀಗೆ ಆರಂಭವಾದ ಅವರ ಫೋಟೋಗ್ರಫಿಯ ಗೀಳು ಹಗಲು ರಾತ್ರಿಗಳೆನ್ನದೆ ನಿದ್ದೆಗೆಡಿಸಿತ್ತಂತೆ. ತಮ್ಮ ಓದಿನ ನಂತರ ತೋಟ ಮಾಡಲು ಮೂಡಿಗೆರೆಗೆ ಬಂದ ಮೇಲೆ ಅನೇಕ ವರ್ಷಗಳು ಫೋಟೋ ತೆಗೆಯುವುದರಲ್ಲಿ ಕಳೆದರಂತೆ. ಹಕ್ಕಿಗಳ ಜೀವನ ಕ್ರಮ, ಅವುಗಳು ಗೂಡುಕಟ್ಟುವ ಬಗೆಗೆ ತಮ್ಮ ತಂದೆಯವರಿಂದಲೇ ಸಾಕಷ್ಟು ಪ್ರಾಥಮಿಕ ಜ್ಞಾನವನ್ನು ಪಡೆದಿದ್ದರು. ಹಳ್ಳಿಗೆ ಹಿಂತಿರುಗಿದ ಮೇಲೆ, ಸ್ವಾನುಭವದಿಂದ ಹಕ್ಕಿಗಳ ಬಗ್ಗೆ ಇನ್ನೂ ಹೆಚ್ಚಿನ ಅರಿವು ಅವರಲ್ಲಿ ಬೆಳೆಯಿತು.
ಪ್ರತಿಯೊಂದು ಹಕ್ಕಿಯ ನಡೆನುಡಿಗಳ ಬಗ್ಗೆ, ಅವುಗಳು ಗೂಡುಕಟ್ಟುವ ರೀತಿಯ ಬಗ್ಗೆ, ಅವು ಮೊಟ್ಟೆಯಿಟ್ಟು ಮರಿಮಾಡುವ ಋತುಮಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಫೋಟೋ ತೆಗೆಯುವವರಿಗೆ ಇರಬೇಕಾಗುತ್ತದೆನ್ನುತ್ತಾರೆ. ಹಕ್ಕಿಗಳು ನಮ್ಮ ಪರಿಸರದ ಅತ್ಯಂತ ಸೂಕ್ಷ್ಮ ಜೀವಿಗಳೆಂದು ಪರಿಸರ ವಿಜ್ಞಾನಿಗಳು ಪರಿಗಣಿಸುತ್ತಾರೆ. ವಾಯು, ಜಲ ಮತ್ತು ಭೂಮಿಯ ನೈರ್ಮಲ್ಯ ಕೆಟ್ಟು ವಿಷಮಯವಾಗಲು ಶುರುವಾದರೆ ನಮ್ಮ ಅರಿವಿಗೆ ಬರುವುದಕ್ಕೆ ಮೊದಲೇ ಹಕ್ಕಿಗಳ ಅರಿವಿಗೆ ಬರುತ್ತದೆ. ಆದ್ದರಿಂದಲೇ ಪರಿಸರ ವಿಜ್ಞಾನಿಗಳು ವಾತಾವರಣಕ್ಕೆ ಹಕ್ಕಿಗಳ ಪ್ರತಿಕ್ರಿಯೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಾರೆ. ಹಕ್ಕಿಗಳು ನಮ್ಮ ಸುತ್ತಮುತ್ತ, ಅಕ್ಕಪಕ್ಕ ಚಿಲಿಪಿಲಿಗುಟ್ಟುತ್ತಾ ಎಷ್ಟು ಹೆಚ್ಚು ಇರುತ್ತವೋ ಅಷ್ಟು ನಮ್ಮ ಪರಿಸರ ಆರೋಗ್ಯಕರವಾಗಿದೆ ಎಂದು ಹೇಳಬಹುದು. “ಪಕ್ಷಿ ವೀಕ್ಷಣೆಯ ಪರಿಣತರಿಗಲ್ಲದೆ ಇತರರಿಗೆ ಅವು ನೋಡಲು ಸಿಕ್ಕುವುದೂ ಕಷ್ಟ. ಇದರಿಂದಾಗಿ ಅವುಗಳು ವಿನಾಶದ ಹಾದಿಯಲ್ಲಿವೆಯೋ, ವೃದ್ಧಿಯಾಗುತ್ತವೆಯೋ ಹೇಳುವುದು ತುಂಬಾ ಕಷ್ಟ. ಇಂಥ ಪರಿಸ್ಥಿತಿಯಲ್ಲಿ ನಮಗೆ ಅರಿವೇ ಇಲ್ಲದೆ ಹಲವು ಜಾತಿಯ ಹಕ್ಕಿಗಳು ಅವಸಾನ ಹೊಂದಬಹುದು. ಹಕ್ಕಿಗಳ ಬಗ್ಗೆ ಅನುಕಂಪ, ಕುತೂಹಲ, ಆಸಕ್ತಿಗಳನ್ನು ಎಲ್ಲರೂ ಬೆಳೆಸಿಕೊಂಡರೆ ಮಾತ್ರ ನಾವು ಈ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗುತ್ತದೆ.
ನಾವು ಹಕ್ಕಿಗಳ ಪರಿಸರವನ್ನು ನಾಶಮಾಡಿ ಅವುಗಳ ಬದುಕುವ ಹಕ್ಕನ್ನು ಕಸಿದುಕೊಂಡರೆ ಅವಕ್ಕೆ ನಮ್ಮಂತೆ ಮಾತಾಡಲು ಬರುವುದಿಲ್ಲ. ಅವು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಕೋರ್ಟ್ಗೆಗೆ ಹೋಗಲಾರವು. ಅವಕ್ಕೆ ಓಟಿನ ಹಕ್ಕು ಇಲ್ಲ. ಅವು ನಮ್ಮತ್ತ ನಿಸ್ಸಹಾಯಕ ಮುಗ್ಧ ನೋಟ ಬೀರಿ ನಿರ್ಗಮಿಸುತ್ತವೆ. ಕೆಲವೊಮ್ಮೆ ಶಾಶ್ವತವಾಗಿ ಅವುಗಳ ನಿರ್ಗಮನ ನಮ್ಮ ನಿರ್ಗಮನದ ಮುನ್ನುಡಿಯಷ್ಟೆ. ಏಕೆಂದರೆ ಅವು ಬದುಕಲಾರದ ಪರಿಸರದಲ್ಲಿ ನಾವು ಬದುಕಲಾಗುವುದಿಲ್ಲ ಎನ್ನುತ್ತಾರೆ. ಹಕ್ಕಿಗಳ ಫೋಟೋ ತೆಗೆಯುವುದು ಸುಲಭದ ಕೆಲಸವಲ್ಲ. ಛಾಯಾಗ್ರಾಹಕ ಹಠಯೋಗಿಯೇ ಆಗಬೇಕು ಎನ್ನುತ್ತಾರೆ. ಹೀಗೆ ಹಠಯೋಗಿಯಂತೆ ತೆಗೆದ ಹಕ್ಕಿಗಳ ಚಿತ್ರಗಳು ಕನ್ನಡ ನಾಡಿನ ಹಕ್ಕಿಗಳು, ಹಕ್ಕಿಪುಕ್ಕ ಪುಸ್ತಕಗಳಲ್ಲಿ ಪ್ರಕಟವಾಗಿವೆ. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ, ಮೈಸೂರಿನ ರಂಗಾಯಣದಲ್ಲಿ ಇವರು ತೆಗೆದ ಛಾಯಾಚಿತ್ರ ಪ್ರದರ್ಶನಗಳು ನಡೆದಿವೆ. ತೇಜಸ್ವಿ ಅವರ ಫೋಟೋಗ್ರಫಿಯು ಕನ್ನಡನಾಡಿನ ಯುವಕರಲ್ಲಿ ಮತ್ತು ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರ ಮೂಡಿಸುವಲ್ಲಿ ಸಹಾಯಕವಾಗುತ್ತಿವೆ. ತಾವು ತೆಗೆದ ಹಕ್ಕಿಗಳ ಛಾಯಾಚಿತ್ರಗಳನ್ನು ಗ್ರೀಟಿಂಗ್ ಕಾರ್ಡುಗಳು ಹಾಗು ಕ್ಯಾಲೆಂಡರ್ ಮೂಲಕ ಕನ್ನಡ ನಾಡಿನ ಮನೆ-ಮನಗಳನ್ನು ತಲುಪಿವೆ. ಪರಿಸರಸ್ನೇಹಿ ಸಮುದಾಯವನ್ನು ನಿರ್ಮಾಣ ಮಾಡುವಲ್ಲಿ ಇವರ ಛಾಯಾಗ್ರಹಣ ಸಾರ್ಥಕಗೊಂಡಿದೆ ಎನ್ನಬಹುದು.
ಪುಸ್ತಕ ಪ್ರಕಾಶನ
ಕನ್ನಡ ಪುಸ್ತಕ ಪ್ರಕಾಶನ ಚರಿತ್ರೆಯಲ್ಲಿ “ಪುಸ್ತಕ ಪ್ರಕಾಶನ” ಸದಭಿರುಚಿಯ, ವೈವಿಧ್ಯಮಯ ಲೋಕದ ಪುಸ್ತಕಗಳನ್ನು ಕನ್ನಡಿಗರಿಗೆ ನಿರಂತರವಾಗಿ ಕೊಡುತ್ತಿರುವ ಏಕೈಕ ಪ್ರಕಾಶನ. “ಪುಸ್ತಕ ಪ್ರಕಾಶನ” ತೇಜಸ್ವಿ ಅವರ ಆದರ್ಶ ಕನಸಿನ ಕೂಸು. ಅವರೇ ಹೇಳುವಂತೆ “ಪುಸ್ತಕ ಪ್ರಕಾಶನ” ಕನ್ನಡ ಪ್ರಕಾಶನ ಕ್ಷೇತ್ರದಲ್ಲಿ ಒಂದು ಅಸದೃಶ ಸಾಹಸ. ವಸ್ತು, ವಿಷಯ, ಪುಸ್ತಕದ ಕಾಗದ, ರಕ್ಷಾಪುಟ ವಿನ್ಯಾಸ, ಶ್ರೇಷ್ಠ ಮುದ್ರಣ, ಓದುಗರಿಗೆ ವಿಚಾರ ತಲುಪಿಸುವ ಗದ್ಯ ಶೈಲಿ, ಪ್ರತಿಯೊಂದರಲ್ಲೂ ಜಗತ್ತಿನ ಅತ್ಯುತ್ತಮ ಪ್ರಕಾಶನಗಳಿಗೆ ಸರಿಗಟ್ಟುವ ಸಾಧನೆ ಮಾಡಬೇಕೆಂಬ ನಿರ್ಧಾರದಿಂದ ನಾಡಿನ ಅಗ್ರಮಾನ್ಯ ಲೇಖಕರ, ಕಲಾವಿದರ, ತಂತ್ರಜ್ಞರ, ಮುದ್ರಕರ ಅವಿರತ ಶ್ರಮ, ಸಾಧನೆ, ಸಹಕಾರಗಳೊಂದಿಗೆ ಹೊರಟಿರುವ ಸಾಹಸ. ಪುಸ್ತಕ ಪ್ರಕಾಶನ ಕೇವಲ ಪುಸ್ತಕಗಳನ್ನು ಬಿಕರಿ ಮಾಡುವ ವ್ಯಾಪಾರಿ ಸಂಸ್ಥೆಯಲ್ಲ. ಅದೊಂದು ಗುರಿ ಮತ್ತು ಆದರ್ಶಗಳನ್ನುಳ್ಳ ಉದ್ದೇಶಪೂರ್ವಕ ಸಾಹಸ.”
ಕಥೆಗಳ ಮೂಲಕ ಪರಿಸರ ವಿಜ್ಞಾನವನ್ನು ಬೋಧಿಸುವ ಕೃತಿಗಳು, ಮನುಷ್ಯನ ತಿಳಿವಳಿಕೆಗೂ ವಿಜ್ಞಾನಕ್ಕೂ ಸವಾಲಾಗಿ ಶತಮಾನಗಳಿಂದ ಕುತೂಹಲ ಕೆರಳಿಸಿದ್ದ ಫ್ಲೈಯಿಂಗ್ ಸಾಸರ್ ಕಥನಗಳು, ಮನುಷ್ಯನ ಉಗಮದ ರೋಚಕ ಕಥನವನ್ನು ಕಟ್ಟಿಕೊಡುವ ಮಿಸ್ಸಿಂಗ್ ಲಿಂಕ್ ನವಪುರಾಣ, ಜಗತ್ತಿನ ಜನಪ್ರಿಯ ಸಾಹಸಿ ಲೇಖಕ ಕೆನೆತ್ ಅಂಡರ್ಸನ್ ಸಾಹಸಕತೆಗಳು, ಗೆಳೆಯರೊಂದಿಗೆ ಅಂಡಮಾನ್ ಪ್ರವಾಸದ ಅನುಭವ, ಮೈಜುಮ್ಮೆನ್ನುವಂತಹ ರಹಸ್ಯಗಳು, ನಿಗೂಢತೆಗಳನ್ನು ಬಿಚ್ಚಿಡುವ ಬರ್ಮುಡಾ ಟ್ರ್ಯಾಂಗಲ್ ಮತ್ತು ಇಪ್ಪತ್ತನೇ ಶತಮಾನದ ಸರ್ವಶ್ರೇಷ್ಠ ಸಾಹಸಮಯ ಸತ್ಯಕಥೆಯ ಸಂಗ್ರಹ ಭಾವಾನುವಾದ ಪ್ಯಾಪಿಲಾನ್ 1 ಮತ್ತು 2 ಇವು ಅಪೂರ್ವ ಕೃತಿಗಳು. ಅಚ್ಚಗನ್ನಡ ನುಡಿಕೋಶ, ಸಹಜ ಕೃಷಿಯ ಚಿಂತನೆಗಳು, ಸೈಕಲ್ಲಿನ ಆತ್ಮಕಥೆ, ಕಥೆ ಕಾದಂಬರಿ, ಆತ್ಮಕತೆ, ಜೀವನಚರಿತ್ರೆ, ಕಂಪ್ಯೂಟರ್ ಕಲಿಕೆ, ಕೀಟ, ಪಕ್ಷಿ ಪ್ರಾಣಿಗಳ ಆಧುನಿಕ ಪಂಚತಂತ್ರ ಕಥೆಗಳಂತಿರುವ ಕಥೆಗಳನ್ನು ಪುಸ್ತಕ ಪ್ರಕಾಶನ ಕನ್ನಡ ಪುಸ್ತಕೋದ್ಯಮದಲ್ಲಿ ನವಶಕೆಯನ್ನು ನಿರ್ಮಿಸಿದೆ. ಜಗತ್ತಿನ ಅನಘ್ರ್ಯ ಕೃತಿಗಳೆಂದೇ ಹೆಸರಾಗಿರುವ “ಲಾರಾ ಇಂಗಲ್ಸ್ ವೈಲ್ಡರ್”ನ ಒಂಬತ್ತು ಸಂಪುಟಗಳು, ಮಿಲನಿಯಮ್ ಸರಣಿಯಲ್ಲಿ ಒಂದು ಶತಮಾನದಲ್ಲಿ ಜಗತ್ತಿನಲ್ಲಿ ಆಗಿಹೋದ ರೋಚಕ ಅನುಭವ, ಘಟನೆ, ದುರಂತ, ಸಾಹಸ, ಯುದ್ಧ, ಶೋಧದ ಕಥಾನಕಗಳನ್ನು ಅಬಾಲವೃದ್ಧರಿಗೂ ಮೈನವಿರೇಳಿಸುವಂತಹ ಹದಿನಾರು ಕೃತಿಗಳನ್ನು ಪ್ರಕಟಿಸಿದ ಕೀತರ್ಿ ಈ ಪ್ರಕಾಶನದ್ದಾಗಿದೆ.
ಇಷ್ಟೇ ಅಲ್ಲದೆ ತೇಜಸ್ವಿ ಅವರ ಕೃತಿಗಳ ಜೊತೆಗೆ ನಾಡಿನ ಪ್ರಸಿದ್ಧ ಲೇಖಕರ ಕೃತಿಗಳನ್ನು ಪ್ರಕಟಿಸಿ ಒಂದು ಬಗೆಯ ಆದರ್ಶ ಮೌಲ್ಯಗಳೊಂದಿಗೆ ಕನ್ನಡ ಸಾಹಿತ್ಯಕ್ಕೆ ಹೊಸ ಹೊಸ ಆಯಾಮಗಳನ್ನು ಸೇರಿಸುತ್ತಿದೆ.
ಕನ್ನಡ ತಂತ್ರಾಂಶ ಅಭಿವೃದ್ಧಿ
ಒಂದು ಸಾವಿರ ವರ್ಷಗಳಿಗೂ ಮೀರಿದ ಇತಿಹಾಸ ಇರುವ ಕನ್ನಡ ಭಾಷೆಗೆ ಇಂದು ಅನೇಕ ಆತಂಕಗಳು ಎದುರಾಗಿವೆ. ಅಂತಹ ಆತಂಕಗಳಿಗೆ ಮುಖಾಮುಖಿಯಾಗುವ ಸಂದರ್ಭ ನಮ್ಮ ಮುಂದಿದೆ ಎನ್ನುತ್ತಾರೆ ತೇಜಸ್ವಿ. ಸಾಫ್ಟ್ವೇರ್ ತಂತ್ರಜ್ಞಾನದಲ್ಲಿ ಇಂಗ್ಲೀಷಿನ ಸಂಪೂರ್ಣ ಅವಲಂಬನೆಯಿಂದ ಮುಕ್ತಿ ಪಡೆಯುವ ಅನಿವಾರ್ಯತೆಯೂ ಅತ್ಯಗತ್ಯವಾಗಿದೆ ಎಂದೂ, ಮೃತಭಾಷೆಗಳ ಸಾಲಿಗೆ ಕನ್ನಡವೂ ಸೇರ್ಪಡೆಯಾಗದಂತೆ ಜೀವಂತಗೊಳಿಸುವ, ಕ್ರಿಯಾಶೀಲವಾಗಿಸುವ ತುರ್ತು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕೆನ್ನುತ್ತಾರೆ. ಜಾಗತೀಕರಣ, ನವವಸಾಹತುಶಾಹಿ ಕಾಲದಲ್ಲಿ ಕನ್ನಡವನ್ನು ರಕ್ಷಿಸಿಕೊಳ್ಳಲು ನಾವು ಮಾಡುತ್ತಿರುವ ಹೋರಾಟ ಯೋಜನೆಗಳ ಜೊತೆಗೆ ತಂತ್ರಜ್ಞಾನ ಭಾಷೆಯನ್ನಾಗಿ ಕನ್ನಡವನ್ನು ಸನ್ನದ್ಧುಗೊಳಿಸಬೇಕೆಂಬ ಮಹದಾಸೆ ಅವರಲ್ಲಿ ೨೦೦೪ರ ಸುಮಾರಿಗೆ ಮೈಪಡೆಯಿತು. ಕನ್ನಡವನ್ನು ಹೆಚ್ಚು ಬಳಕೆಯಲ್ಲಿ ಬಳಸಲು ಆಗುವಂತೆ ಹಾಗೂ ಯುವ ಪೀಳಿಗೆ ಕನ್ನಡವನ್ನು ದೈನಂದಿನ ಚಟುವಟಿಕೆಗಳಿಗೆ ಹೆಚ್ಚು ಹೆಚ್ಚು ಬಳಸುವಂಥ ಪರಿಸರ ನಿರ್ಮಾಣ ಮಾಡಬೇಕೆನ್ನುತ್ತಾರೆ. ಕನ್ನಡ ಕೇವಲ ಒಂದು ಕುಟುಂಬದ ಭಾಷೆಯಾಗಿ, ಮನೆಗಳಲ್ಲಿ ಬಳಸುವ ಭಾಷೆಯಾಗಿ ಮಾತ್ರ ಉಳಿಯುವ ಅಪಾಯದಿಂದ ಪಾರು ಮಾಡಿ, ಕನ್ನಡ ಸಾಹಿತ್ಯಕವಾಗಿ ಸಮೃದ್ಧಗೊಂಡಿರುವಂತೆ ಸಾಮಾಜಿಕ, ರಾಜಕೀಯ, ಅರ್ಥಿಕ , ವೈಜ್ಞಾನಿಕ ತಂತ್ರಜ್ಞಾನದ ಭಾಷೆಯನ್ನಾಗಿ ಬಳಸಲು ಕನ್ನಡ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ನಿರಂತರ ಶೋಧನೆಯಲ್ಲಿ ತೊಡಗಿದ್ದರು. ಇಂತಹ ಶೋಧನೆಯು ೨೦೦೪ರ ಸುಮಾರಿಗೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ವಿಸ್ತರಣಶಾಖೆಯಾದ ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿಯಲ್ಲಿ ಕೆಲವು ಆಸಕ್ತರ, ಯುವಕರ ಸಹಾಯದಿಂದ ಸಾಕಾರಗೊಂಡಿದೆ. ಈ ತಂತ್ರಾಂಶಕ್ಕಾಗಿ ಡಾ.ಚಂದ್ರಶೇಖರ ಕಂಬಾರ ಅವರ ಶಾಸಕರ ಅನುದಾನ ಮತ್ತು ಕನ್ನಡ ವಿಶ್ವವಿದ್ಯಾಲಯದಿಂದ ಧನಸಹಾಯ ದೊರಕಿತ್ತು. ಕನ್ನಡದಲ್ಲಿ ಅಭಿವೃದ್ಧಿ ಆಗಬೇಕಾಗಿರುವ ಕನ್ನಡ ತಂತ್ರಾಂಶ ಹೇಗಿರಬೇಕು, ಯಾವ ತಾಂತ್ರಿಕ ಅಂಶಗಳಲ್ಲಿ ಅಭಿವೃದ್ಧಿಯಾಗಬೇಕೆಂದು ಮೊದಲು ಚಿಂತಿಸಿ, ಪ್ರತಿ ಹಂತದಲ್ಲಿಯೂ ಮಾರ್ಗದರ್ಶನ ಮಾಡಿ ಅಭಿವೃದ್ಧಿಪಡಿಸಲು ಹಗಲು-ರಾತ್ರಿಗಳೆನ್ನದೆ ಶ್ರಮಿಸಿದ್ದರು ತೇಜಸ್ವಿ. ಕ್ರಿಯಾಶೀಲವಾದ ಸಕ್ರಿಯವಾದ ಜೀವಚೈತನ್ಯವನ್ನು ಕನ್ನಡಕ್ಕೆ ನೀಡಿದ್ದು ಅವರ ಕನ್ನಡ ಪ್ರೀತಿಗೆ ಸಾಕ್ಷಿಯಂತಿದೆ.
ಸಾಹಿತ್ಯ – ಕೃಷಿ
ವ್ಯಕ್ತಿ ವಿಶಿಷ್ಟತೆಯಿಂದ ಸಮಷ್ಟಿ ಜೀವ ಸಮಾನತೆಯ ಕಡೆಗೆ
ತೇಜಸ್ವಿ ಅವರು ಕಾವ್ಯ, ನಾಟಕ, ಕಥೆ, ಕಾದಂಬರಿ, ಅನುವಾದ, ವಿಮರ್ಶೆ, ವೈಜ್ಞಾನಿಕ, ವೈಚಾರಿಕ, ಆತ್ಮಕಥೆ ಹಾಗೂ ಪರಿಸರ ಕಥನ-ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಐವತ್ತು ವರ್ಷಗಳ ತಮ್ಮ ಬರವಣಿಗೆಯಲ್ಲಿ ಸ್ವಾತಂತ್ರ್ಯಾನಂತರದ ರಾಜಕೀಯ, ಧಾರ್ಮಿಕ, ಪರಿಸರ, ವಿಜ್ಞಾನ, ಶಿಕ್ಷಣ, ಅಭಿವೃದ್ಧಿಯನ್ನು ಕುರಿತು ಚಿಂತಿಸಿದ್ದಾರೆ. ತೇಜಸ್ವಿ ಅವರು ಕನ್ನಡ ಸಾಹಿತ್ಯ ಕಂಡ ಅನನ್ಯವಾದ ಗದ್ಯ ಕಥನಕಾರರಾಗಿ ಪ್ರಸಿದ್ಧರಾಗಿದ್ದಾರೆ.
ತೇಜಸ್ವಿ ಅವರ ಪ್ರಕಟಿತ ಏಕೈಕ ಕವನ ಸಂಕಲನ “ಸೋಮುವಿನ ಸ್ವಗತಲಹರಿ”(೧೯೬೨) ಇದು ರಾಜಕೀಯ ವಿಡಂಬನೆ, ಬದುಕಿನ ಹತಾಶೆ, ಅಸಹಾಯಕತೆ, ಸಿಟ್ಟುಗಳ ಸ್ವಗತ ಲಹರಿಯಾಗಿದೆ.
“ಯಮಳ ಪ್ರಶ್ನೆ” ನಾಟಕ ೧೯೬೪ರಲ್ಲಿ ನವ್ಯ ಸಾಹಿತ್ಯ ಚಳವಳಿಯ ಉಚ್ಛ್ರಾಯ ಕಾಲದಲ್ಲಿ ಪ್ರಕಟವಾಯಿತು. ಮಾರ್ಗಮಧ್ಯೆ ಕೆಟ್ಟು ನಿಂತ ಮೋಟಾರು ಬೈಕು ಮತ್ತು ತರುಣರಿಬ್ಬರ ಸಂವಾದದ ಸುತ್ತ ಸಾಗುವ ಈ ನಾಟಕ ಜೀವನದ ಸಂಕೀರ್ಣತೆ ಹಾಗೂ ಅಸಂಗತತೆಯನ್ನು ಬಿಂಬಿಸುತ್ತದೆ. ನಾಟಕದಲ್ಲಿ ಬರುವ ಮೋಟಾರು ಸೈಕಲ್ ಚಿಕಿತ್ಸೆಗೆ ಗುಣಪಡಿಸಲಾರದ ನಮ್ಮ ರಾಜಕೀಯ, ಸಾಮಾಜಿಕ ವ್ಯವಸ್ಥೆಯ ಸಂಕೇತವಾಗಿದೆ. ಇಂಥ ಅನೇಕ ಕಾರಣಗಳಿಗಾಗಿ ಕನ್ನಡ ಆಧುನಿಕ ರಂಗಭೂಮಿಯಲ್ಲಿ ಈ ನಾಟಕಕ್ಕೆ ವಿಶಿಷ್ಟ ಸ್ಥಾನ ಪ್ರಾಪ್ತವಾಗಿದೆ.
ತೇಜಸ್ವಿ ಅವರು ಬರೆದ ನಿರ್ದಿಷ್ಟ ಉದ್ದೇಶಿತ ವೈಚಾರಿಕ ಕೃತಿ ೧೯೬೪ರ “ವ್ಯಕ್ತಿ ವಿಶಿಷ್ಟ ಸಿದ್ಧಾಂತ”. ಇದೊಂದು ವಿಲಕ್ಷಣ ಕೃತಿ. ವ್ಯಕ್ತಿ ವಿಶಿಷ್ಟವಾದವು ನಾಸ್ತಿಕವಾದ, ಆಸ್ತಿಕವಾದ ಇತ್ಯಾದಿ ಎಲ್ಲ ವಾದಗಳಿಗಿಂತ ಮೂಲಭೂತವಾದುದು. ಇದು ಯಾವೊಂದು ನಿರ್ಣಯಕ್ಕೂ ವ್ಯಕ್ತಿಯೇ ಬರುವಂಥ ಅನಂತ ಜವಾಬ್ದಾರಿಯನ್ನು ಒತ್ತಿ ಹೇಳುತ್ತದೆ. ಪರಿಸರ ಮತ್ತು ವ್ಯಕ್ತಿತ್ವದ ಘರ್ಷಣೆಯಾದ ಜೀವನದಲ್ಲಿ ಸಂವೇದನೆಯನ್ನು ಮಾತ್ರ ಸ್ವಂತವೂ, ಸ್ವತಂತ್ರವೂ ಆಗಿ ಉಳಿಸಿಕೊಂಡು ಹೋಗುವುದೇ ಅದರ ಮೂಲ ಕರ್ತವ್ಯ ಎಂಬ ತತ್ವವನ್ನು ಇಲ್ಲಿ ಕಾಣುತ್ತೇವೆ.
ತೇಜಸ್ವಿ ಅವರು ಮೊದಲು ಬರೆದ ಕಥೆ “ಲಿಂಗ ಬಂದ” ಅದರ ಜೊತೆಗೆ “ಗುಡುಗು ಹೇಳಿದ್ದೇನು” ಎನ್ನುವ ಇನ್ನೊಂದು ಕಥೆಯನ್ನು ಬರೆದು ೧೯೫೭ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಗಳಿಗೆ ಕಳಿಸಿದರು. ಆ ವರ್ಷ ಕ್ರಮವಾಗಿ “ಲಿಂಗ ಬಂದ” ಕಥೆಗೆ ಪ್ರಥಮ ಬಹುಮಾನವೂ “ಗುಡುಗು ಹೇಳಿದ್ದೇನು” ಎನ್ನುವ ಕಥೆ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಯಾಗಿ ಪ್ರಕಟವಾಯಿತು. ೧೯೫೭ರಿಂದ ಇಲ್ಲಿಯವರೆಗೆ ತೇಜಸ್ವಿ ಅವರ ಸಾಹಿತ್ಯ ಕಥನ ಸಾವಿರಾರು ಪುಟಗಳಲ್ಲಿ ಅವ್ಯಾಹತವಾಗಿ ಹರಿದು ಬಂದಿದೆ.
ತೇಜಸ್ವಿ ಅವರು ಸ್ವಾತಂತ್ರ್ಯಾನಂತರದ ಸಾಂಸ್ಕೃತಿಕ ಸ್ಥಿತ್ಯಂತರಗಳಿಗೆ ನಿರಂತರವಾಗಿ ಪ್ರತಿಕ್ರಿಯಿಸಿದವರು. ತೇಜಸ್ವಿ ಅವರು ಬರೆಯಲಾರಂಭಿಸಿದಾಗಿನಿಂದ ಇದುವರೆಗಿನ ಅವರ ವೈಚಾರಿಕ ನಿಲುವುಗಳಲ್ಲಿ ಮಾರ್ಮಿಕ ಬೆಳವಣಿಗೆ ಕಂಡುಬರುತ್ತದೆ. “ಅಬಚೂರಿನ ಪೋಸ್ಟಾಫೀಸು”(೧೯೭೩) ಕಥಾ ಸಂಕಲನದಲ್ಲಿಯೇ ಅವರ ತಾತ್ತ್ವಿಕ ವಿಚಾರಗಳಲ್ಲಿ ಸ್ಪಷ್ಟತೆ, ಸ್ವಂತಿಕೆ ಹೊರಹೊಮ್ಮಿದೆ. ಹೀಗೆ ಬದುಕಿನ ಪ್ರಯೋಗಶೀಲತೆಯ ಕಡೆಗೆ ತೇಜಸ್ವಿ ಅವರ ವೈಚಾರಿಕತೆ ಮುನ್ನಡೆಯಿತು. ಹಾಗೆಯೇ ಹೊಸ ದಿಗಂತಗಳೆಡೆಗೆ ಅವರ ಸಂವೇದನೆ ನಿರಂತರವಾಗಿ ತುಡಿಯುತ್ತಿತ್ತು.
ಲೋಹಿಯಾರ ತತ್ತ್ವಚಿಂತನೆ, ಕುವೆಂಪು ಅವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಅವರ ಬದುಕಿನಲ್ಲಿನ ಪ್ರಯೋಗಶೀಲತೆ-ಈ ಮೂರೇ ತೇಜಸ್ವಿ ಅವರ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮ ಬೀರಿದವುಗಳೆಂದು, ಇವೇ ಮುಂಬರುವ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯ ಶಕ್ತಿಯಾಗಬಲ್ಲವು ಎಂಬ ನಂಬಿಕೆ ಅವರದು. ಪುರೋಹಿತಶಾಹಿ ವರ್ಗದ ಬೌದ್ಧಿಕ ದಬ್ಬಾಳಿಕೆ, ನವ್ಯ ಸಾಹಿತ್ಯದ ಯಾಂತ್ರಿಕತೆ ಹಾಗೂ ಸಾಹಿತ್ಯದ ಮಟ್ಟಿಗೆ ಸೀಮಿತಗೊಂಡ ಸಾಮಾಜಿಕ ಜವಾಬ್ದಾರಿಗಳು ಯಾವುದೋ ಒಂದು ವರ್ಗದ ಕೆಲವೇ ಜನರ ಆಶೋತ್ತರಗಳಿಗೆ ವೇದಿಕೆಯಾಗದೆ ಜನಸಾಮಾನ್ಯರ ಸಾಮಾಜಿಕ, ರಾಜಕೀಯ, ಧಾಮರ್ಿಕ ಸಮಸ್ಯೆಗಳಿಗೆ ಸ್ಪಂದಿಸಬೇಕೆಂಬುದು ತೇಜಸ್ವಿ ಅವರ ಗಾಢ ನಿಲುವು.
ಕರ್ವಾಲೋ ಅತ್ಯಂತ ಜನಪ್ರಿಯ ಕಾದಂಬರಿ. ೧೯೮೦ ರಿಂದ ೨೦೧೮ರವರೆಗೆ ಇದು ೪೩ ಮುದ್ರಣಗಳನ್ನು ಕಂಡಿದೆ. ಇಂಗ್ಲಿಷ್, ಜಪಾನಿ, ಜರ್ಮನ್ ಭಾಷೆಗಳಿಗೆ ಅನುವಾದವಾಗಿದೆ. ಇದೊಂದು ಕನ್ನಡ ಪುಸ್ತಕ ಪ್ರಕಟನೆಯ ಚರಿತ್ರೆಯಲ್ಲಿ ದಾಖಲೆ. ಅಷ್ಟೇ ಅಲ್ಲದೆ, ಕೆಲವಾರು ವರ್ಷಗಳು ಕರ್ನಾಟಕ ಸರ್ಕಾರ ಪದವಿ ಪೂರ್ವ ತರಗತಿಗಳಿಗೆ ಪಠ್ಯಪುಸ್ತಕವನ್ನು ಮಾಡಿತ್ತು. ಹಾಗಾಗಿ ಪ್ರತಿವರ್ಷ ರಾಜ್ಯದಾದ್ಯಂತ ಲಕ್ಷಾಂತರ ಪ್ರತಿಗಳು ಮಾರಾಟವಾಗಿವೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾದಂಬರಿ ಪ್ರಕಾರದ ಅರ್ಥಸಾಧ್ಯತೆಗಳನ್ನೇ ವಿಸ್ತರಿಸಿದ ಕೃತಿ. ಜೀವಸಂಕುಲಗಳ ವಿನಾಶ ಮತ್ತು ಅವುಗಳನ್ನು ಹಿಡಿಯಲೆತ್ನಿಸುವ ಮನುಷ್ಯನ ವಿಫಲತೆಯ ಕಥೆಯೇ ಕರ್ವಾಲೋ ಕಾದಂಬರಿ.
ಪರಿಸರ ಕೇಂದ್ರಿತ ಹೊಸ ಆವಿಷ್ಕಾರಗಳನ್ನು ಅರಿವಿನ ಸಂಶ್ಲೇಷಿತ ರೂಪಗಳ ಕಡೆಗೆ ಅವರ ಕಥನ ಇಂದು ಶೋಧಿತಗೊಳ್ಳುತ್ತಿದೆ. ಅಂದರೆ ವ್ಯಕ್ತಿ ವಿಶಿಷ್ಟತೆಯಿಂದ ಸಮಷ್ಟಿ ಜೀವ ಸಮಾನತೆಯ ಕಡೆಗೆ ಅವರ ಚಿಂತನೆ ಹರಿಯುತ್ತಿದೆ. “… ಇಕಾಲಜಿ ನಮ್ಮ ಮುಂದೆ ಸಂಪೂರ್ಣ ಹೊಸ ದೃಷ್ಟಿಯೊಂದನ್ನು ತೋರಿಸುತ್ತಿದೆ. ಅದೇ ಸಂಶ್ಲೇಷಣ ವಿಧಾನ. ಇಕಾಲಜಿಯ ಅರಿವು ವಿಭಜಿಸಿ ವಿಶ್ಲೇಷಿಸುವುದರಿಂದ ಬರುವುದಿಲ್ಲ. ಇಕಾಲಜಿಯೇ ಜ್ಞಾನದ ಎಲ್ಲ ಶಾಖೆಗಳ ಸಂಶ್ಲೇಷಣೆ ಮತ್ತು ಸಂಯೋಜನೆ” ಎಂದೂ, ನಾವು ಈಗಾಗಲೇ “ವಿಶ್ಲೇಷಿಸುತ್ತ ವಿಭಜಿಸುತ್ತ ಬಹುದೂರ ಬಂದಿರುವ ನಮ್ಮ ವೈಜ್ಞಾನಿಕ ನಾಗರೀಕತೆಗೆ ಇಂದು ಪರಿಸರ ವಿಜ್ಙಾನ ಅಥವಾ ಇಕಾಲಜಿ ಸತ್ಯದ ಹೊಸ ಹೊಸ ಆವಿಷ್ಕಾರಗಳನ್ನು ಅರಿವಿನ ಸಂಶ್ಲೇಷಿತ ರೂಪಗಳನ್ನು ತೋರಿಸುತ್ತಿದೆ” ಎಂದು ಸಾಹಿತ್ಯಾಧ್ಯಯನಕ್ಕೆ ಹೊಸ ವಿಮರ್ಶಾ ಮಾನದಂಡಗಳ ಅಗತ್ಯತೆಯನ್ನು ಈ ಮೂಲಕ ತೇಜಸ್ವಿ ಅವರು ಸೂಚಿಸಿದ್ದಾರೆ.
ತೇಜಸ್ವಿ ಅವರ ಅಭಿವ್ಯಕ್ತಿಯೇ ಒಂದು ಪರಿಸರ ಕಥನ. ಸ್ವಾತಂತ್ರ್ಯಾನಂತರದ ನಮ್ಮ ವಿದ್ಯಾಭ್ಯಾಸ ಪದ್ಧತಿ ಹುಟ್ಟು ಹಾಕಿದ ಅಸಂಬದ್ಧತೆಗಳನ್ನೂ, ಶಿಕ್ಷಿತ ಮತ್ತು ಅಶಿಕ್ಷಿತರ ನಡುವೆ ಅಂತರಗಳನ್ನು ಸೃಷ್ಟಿಸಿದ ಶೈಕ್ಷಣಿಕ ಪರಿಸರವನ್ನು, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಸರದಲ್ಲಿ ನಿರ್ಮಾಣವಾದ ಪಶ್ಚಿಮದ ಯಾಂತ್ರಿಕ ಅನುಕರಣೆಯನ್ನು ತೇಜಸ್ವಿ ನಿರಾಕರಿಸುತ್ತಾರೆ. ಆ ಮುಖೇನ ಹೊಸ ಶೋಧನೆಗೆ ಮುಖ ಮಾಡುತ್ತಾರೆ. ಈ ಶೋಧ “ಕರ್ವಾಲೋ” ಕಾದಂಬರಿಯಿಂದ ಆರಂಭಗೊಂಡು “ಮಾಯಾಲೋಕ”ದವರೆಗೆ ಬೆಳೆದು ಬಂದಿದೆ. ಹಲವು ರೂಢಿಗತ ಮಾದರಿಗಳನ್ನು, ರೂಢಿಗತ ಬಂಡಾಯಗಳನ್ನು ಅವರ ಪ್ರತಿಭೆ ವ್ಯಂಗ್ಯಕ್ಕೆ ಗುರಿಪಡಿಸುತ್ತದೆ.
ನವವಸಾಹತುಶಾಹಿ, ಜಾಗತೀಕರಣದ ಸಂದರ್ಭದಲ್ಲಿ ದೇಶದ ರಾಜಕೀಯ, ಧಾರ್ಮಿಕ ವಲಯಗಳು ಹುಟ್ಟು ಹಾಕಿದ ಗೊಂದಲ, ದುರಂತಗಳ ಕಥನಗಳನ್ನು “ಚಿದಂಬರ ರಹಸ್ಯ”ದ ಕೆಸರೂರಿನಲ್ಲಿ, “ಜುಗಾರಿ ಕ್ರಾಸ್”, “ಮಾಯಾಲೋಕ”ದ ಗೊಂದಲಗೇರಿಗಳಲ್ಲಿ ಕಾಣಿಸಿದ್ದಾರೆ. ಅಧಿಕಾರದ ದಾಹಕ್ಕಾಗಿ ಹುಟ್ಟು ಹಾಕಿದ ಧಾರ್ಮಿಕ ಹಾಗೂ ಮತಾಂಧ ಕಲಹಗಳು, ಅಭಿವೃದ್ಧಿಯ ನೆಪದಲ್ಲಿ ಪರಿಸರವನ್ನು ಘಾಸಿಗೊಳಿಸಿದ ಅವೈಜ್ಙಾನಿಕ ನಿಲುವುಗಳು ಮತ್ತು ಸಾರ್ವಜನಿಕರ ಬೇಜವಾಬ್ದಾರಿ ವರ್ತನೆಗಳನ್ನು ಈ ಕಥನಗಳಲ್ಲಿ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ, ಊಹಿಸಲೂ ಸಾಧ್ಯವಿಲ್ಲದ ಗೋಜಲು ಗೋಜಲು ಬದುಕನ್ನು ಇಂಥ ಕಡೆ ಕಾಣುತ್ತೇವೆ. ಪರಿಸರ ಕೇಂದ್ರಿತ ಕೃತಿಗಳಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಗಳ ಬಗೆಗೆ ವ್ಯಂಗ್ಯವಿರುವಂತೆ, ಅದರಿಂದ ಎದುರಾಗುವ ಅನೇಕ ಸಮಸ್ಯೆಗಳ ಬಗೆಗೆ ತೀವ್ರ ವಿಡಂಬನೆ ಇದೆ. ಪರಿಸರ, ಶೈಕ್ಷಣಿಕ ಪರಿಸರ, ಮನುಷ್ಯನ ಬದುಕು ಅವಸಾನದ ಕಡೆಗೆ ಮುಖಮಾಡಿರುವ ದುರಂತಗಳನ್ನು ಕುರಿತ ಚಿಂತನೆ ಅವರ ಇಂತಹ ಕಥನಗಳ ಮುಖ್ಯ ನೆಲೆ. ಆಧುನಿಕ ಬದುಕಿನ ಗೊಂದಲಗಳನ್ನು ಹಾಗೂ ಅಖಂಡ ಪರಿಸರಕ್ಕೆ ಎದುರಾಗಿರುವ ಆತಂಕಗಳನ್ನು ಅವರ ಅನೇಕ ಕೃತಿಗಳಲ್ಲಿ ಕಾಣುತ್ತೇವೆ.
“ಕೆಸರೂರು” ಮತ್ತು “ಜುಗಾರಿ ಕ್ರಾಸ್”ಗಳು ಸಮೃದ್ಧ ಜೀವವೈವಿಧ್ಯತೆಯನ್ನು ಹೊಂದಿರುವ ತಾಣಗಳು. ಪ್ರಪಂಚದಲ್ಲಿಯೇ ಹೆಸರಾಂತ ಪರಿಮಳಯುಕ್ತ ಏಲಕ್ಕಿ ಬೆಳೆಯುವ, ಗಂಧ, ತೇಗ, ಅಸಂಖ್ಯ ಜೀವರಾಶಿಯನ್ನು ಹೊಂದಿರುವುದರಿಂದ ಆರ್ಥಿಕ ಸಂಪನ್ಮೂಲಗಳ ಹುಟ್ಟು ನೆಲೆಗಳು. ಇಂಥ ಪರಿಸರಕ್ಕೆ ಮನುಷ್ಯನ ಸ್ವಾರ್ಥ-ಲೋಭಗಳು ದಿನೇ ದಿನೇ ಹೇಗೆ ಮಾರಕವಾಗುತ್ತಿವೆ ಎಂಬುದನ್ನು ಇಂಥ ಕಥನಗಳಲ್ಲಿ ಚಿಂತಿಸಿದ್ದಾರೆ..
ಮನುಷ್ಯನ ಧಾರ್ಮಿಕ ಮತಾಂಧತೆ, ಹಣದ ಬಗೆಗಿನ ವ್ಯಾಮೋಹಗಳು ಸಮಷ್ಟಿ ಪರಿಸರವನ್ನೇ ಲಂಟಾನಾ ರಾಕ್ಷಸನ ಬಾಯಿಗೆ, ಬೆಂಕಿಗೆ ಆಹುತಿ ಮಾಡುವ ದುರಂತವನ್ನು ಈ ಕೃತಿಗಳು ಒಡಲಲ್ಲಿರಿಸಿಕೊಂಡಿವೆ. ಕಾಳದಂಧೆಗಳಿಗೆ ಸರ್ಕಾರ, ಕಾನೂನು ಮತ್ತು ನ್ಯಾಯಾಲಯಗಳ ಸಮ್ಮತಿ ಪರವಾನಗಿಗಳನ್ನು ಗಿಟ್ಟಿಸಿಕೊಂಡು ನಡೆಸುತ್ತಿರುವ ಹಗಲು ದರೋಡೆಗಳಿಂದ ಇಡೀ ಪರಿಸರ ಹಾಗೂ ಸಂಸ್ಕೃತಿಯನ್ನು ಒಂದಲ್ಲ ಒಂದು ದಿನ ದುರಂತಕ್ಕೆ ಒಡ್ಡುವ ಭೀಕರ ಚಿತ್ರಗಳನ್ನು ಈ ಕಥನಗಳು ಬಿಚ್ಚಿಡುತ್ತವೆ.
ರಾಜಕಾರಣ ಹಾಗೂ ಅರಣ್ಯ ಇಲಾಖೆಯ ಐಲುತನ ಹಾಗೂ ದುರಾಸೆಗಳು ಒಮ್ಮೆ ಮಾಡಿದ ಅಪರಾಧ, ಪ್ರಪಂಚ ಪ್ರಸಿದ್ಧ ಏಲಕ್ಕಿಯನ್ನು ಸರ್ವನಾಶ ಮಾಡುವುದರೊಂದಿಗೆ ಒಂದು ಸಂಸ್ಕೃತಿಯ ಅವಸಾನಕ್ಕೂ ಗುರಿಯಾಗುವ ಬಗೆಯನ್ನು ಈ ಕಥನಗಳು ಕಟ್ಟಿ ಕೊಡುತ್ತವೆ. ”ಒಂದು ಸಸ್ಯದ ಅವನತಿಯೆಂದರೆ ಅದರಿಂದ ಬದುಕುತ್ತಿದ್ದ ಕೀಟ ಸಮೂಹ. ಅವುಗಳನ್ನೇ ಆಹಾರ ಮಾಡಿಕೊಂಡಿದ್ದ ಪಕ್ಷಿಗಳು, ಅವುಗಳಿಂದ ಬೀಜ ಪ್ರಸಾರವಾಗಿ ಹುಟ್ಟಿಕೊಳ್ಳುತ್ತಿದ್ದ ವೃಕ್ಷ ಸಂಕುಲ. ಅದರ ಆಧಾರದ ಮೇಲೆ ಹೆಪ್ಖುಗಟ್ಟಿ. ಮೋಡ, ಸುರಿಯುವ ಮಳೆ ಮತ್ತು ಇವುಗಳೆಲ್ಲದರ ಆಧಾರದ ಮೇಲೆ ಬದುಕುವ ಮನುಷ್ಯ. ಇಡೀ ವಿಶ್ವ ಹೇಗೆ ಒಂದಕ್ಕೊಂದು ತಮಗಿರುವ ಸಾವಯವ ಸಂಬಂಧಗಳಿಂದ ಸಮತೋಲನಗಳ ಮೇಲೆ ನಿಂತಿರುವ ಪರಿಸರ, ಅವನತಿಯ ಹಾದಿ ಹಿಡಿಯುತ್ತಿದೆ ಎಂಬ ಆಧುನಿಕ ಸಮಾಜದ ದುರಂತ ಕಥನವನ್ನು ತೆರೆದಿಡುತ್ತವೆ ಇವರ ಬಹುಪಾಲು ಕೃತಿಗಳು.
ಈ ಪ್ರಕ್ರಿಯೆ ಕೇವಲ ಯಾವುದೋ ಒಂದು ಸೀಮಿತ ಪ್ರದೇಶಕ್ಕೆ ಮಾತ್ರ ಸಂಬಂಧಿಸಿದವುಗಳಾಗಿ ಕಾಣುವುದಿಲ್ಲ. ಇಡೀ ರಾಷ್ಟ್ರ ಒಂದು ಕೆಸರೂರಾಗಿಯೂ, ಕೆಸರೂರಿನ ರೋಗಕ್ಕೆ ಇಡೀ ಪರಿಸರವನ್ನು, ಜನಪದವನ್ನು, ಸಂಸ್ಕೃತಿಯನ್ನು ಅವನತಿಗೆ ಗುರಿಪಡಿಸುತ್ತಿರುವ ಧ್ವನಿ ಇಲ್ಲಿದೆ.
“ಜುಗಾರಿ ಕ್ರಾಸ್” ಒಂದು ಶತಮಾನದ ಅವಸಾನದ ಕಥನ. ಇಲ್ಲಿ ಸ್ಥಳೀಯ ಬದುಕು ಹಾಗೂ ಸಂಪತ್ತು ಜುಗಾರಿ ಕ್ರಾಸಿನಲ್ಲಿ ಬಿಕರಿಯಾಗುತ್ತಿರುವ ಕಡುವಾಸ್ತವ ಜಗತ್ತು ಕೆಲವೇ ಗಂಟೆಗಳಲ್ಲಿ ಮಾರ್ಮಿಕವಾಗಿ ತೆರೆದುಕೊಳ್ಳುತ್ತದೆ.
ನವೋದಯಕಾಲದ “ಹಾಳೂರ”ನ್ನು ಕುವೆಂಪು ಚಿತ್ರಿಸಿದರೆ ಸ್ವಾತಂತ್ರ್ಯಾನಂತರದ ಭಾರತದ “ಹಾಳೂರು ಕಥನ”ಗಳನ್ನು ಇಂಥ ಕೃತಿಗಳಲ್ಲಿ ತೇಜಸ್ವಿ ಸೆರೆಹಿಡಿದಿದ್ದಾರೆ. ನಾಗರೀಕತೆಯೊಳಗೆ ಪ್ಲಾಸ್ಟಿಕ್ಕಿನಂಥ ಆಧುನಿಕ ರಾಕ್ಷಸನ ಆಗಮನದಿಂದ ಅನೇಕ ಹಳ್ಳಿ, ಮನೆತನ, ಬುಡಕಟ್ಟುಗಳು ಹೇಗೆ ನಿನರ್ಾಮವಾದವೆಂಬ ಚಿತ್ರಗಳು ಇಲ್ಲಿವೆ. ಗ್ರಾಮ ಸಮಾಜದ ಅವಸಾನದ ಜೊತೆಗೆ ಅನೇಕಾನೇಕ ಕಾಳದಂಧೆಗಳ ತವರುಮನೆಯಂತಿರುವ ಸಮಕಾಲೀನ ಸಂದರ್ಭದ ವಿಶ್ವರೂಪ ಇಲ್ಲಿದೆ. ಕೇವಲ ಇಪತ್ನಾಲ್ಕು ಗಂಟೆಗಳಲ್ಲಿ ನಡೆಯುವ ಕಥಾ ಹಂದರದಲ್ಲಿ ಮೈನವಿರೇಳಿಸುವ ನಿರೂಪಣೆಯಲ್ಲಿ ಇಲ್ಲಿನ ಕಥೆ ತೆರೆದುಕೊಳ್ಳುತ್ತದೆ.
ಒಂದು ಕಾಲದಲ್ಲಿ ಕ್ರಿಯಾಶೀಲವಾಗಿದ್ದ “ಮೇದರಹಳ್ಳಿ” ಜೀಣರ್ಾವಸ್ಥೆಗೊಂಡು ಹಾಳೂರಾದದ್ದು ನಾಗರೀಕತೆಯೊಳಗೆ “ಪ್ಲಾಸ್ಟಿಕ್” ಪ್ರವೇಶದಿಂದ. ಪ್ಲಾಸ್ಟಿಕ್ಕಿನಂಥ ರಾಕ್ಷಸನಿಂದ ಒಂದು ಸಾಂಸ್ಕೃತಿಕ ಪರಿಸರ, ಸಮುದಾಯದ ನೆನಪು ವಿಸ್ಮೃತಿಗೊಳ್ಳುವ ಪ್ರಕ್ರಿಯೆಯ ಧೃಢವಾಸ್ತವತೆಯನ್ನು ಜುಗಾರಿಕ್ರಾಸ್ ಕಾದಂಬರಿ ಬಿಚ್ಚಿಡುತ್ತದೆ.
“ಮಾಯಾಲೋಕ” ತೇಜಸ್ವಿ ಅವರ ಮಹತ್ವಾಕಾಂಕ್ಷೆಯ ಕೃತಿ. ಇಲ್ಲಿ ಮೂಡಿಬಂದಿರುವ ಕಥನ ಕ್ರಮವೇ ಕನ್ನಡ ಸಾಹಿತ್ಯದಲ್ಲಿ ಹೊಸದು. ಸಿದ್ಧ ಮಾದರಿಗಳನ್ನು, ಸಿದ್ಧತತ್ತ್ವಗಳನ್ನು ಈ ಕೃತಿ ಮುರಿದುಬಿಡುತ್ತದೆ. ಆ ಮುಖೇನ ವಿಮರ್ಶೆಗೆ ಹೊಸ ಸವಾಲಾಗಿಯೂ ನಿಲ್ಲುವ ಶಕ್ತಿಯುಳ್ಳ ಕೃತಿ. ಇದನ್ನು ಓದಿದಂತೆಲ್ಲ ಇದು ಕಾದಂಬರಿಯೊ, ಮಹಾಪ್ರಬಂಧವೊ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಧುನಿಕ ಬದುಕಿನ ಗೊಂದಲ – ಗೋಜಲುಗಳ ಸಮಕಾಲೀನ ನವಪುರಾಣವೊಂದು ಓದುಗನ ಮುಂದೆ ಸಾಕಾರಗೊಳ್ಳುತ್ತದೆ. ತುಂಬಾ ಸಾಧಾರಣವಾಗಿ, ಸರಳವಾಗಿ ಕಾಣುವ ಕಥೆ, ಕಥನ ಕ್ರಮ ಓದುಗನನ್ನು ಸಹಜವಾಗಿಯೇ ಮೋಡಿ ಮಾಡಿಬಿಡುತ್ತದೆ. ಇಂಥ ಕೃತಿಗಳನ್ನು ಮೌಲ್ಯಮಾಪನ ಮಾಡುವುದು, ವಿಮರ್ಶಿಸುವುದು ಸುಲಭವಲ್ಲ. ಹಾಗಾಗಿ ಹೊಸ ವಿಮರ್ಶಾವಿವೇಕವೂ ಇಂಥ ಕೃತಿಗಳ ಮೌಲ್ಯವನ್ನು ಕಟ್ಟಲು ಶೋಧಿತಗೊಳ್ಳಬೇಕಾಗುತ್ತದೆ.
ಪ್ರಶಸ್ತಿ ಪುರಸ್ಕಾರ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅಥವಾ ‘ಪೂಚಂತೇ’ ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳು ಅನೇಕ. ಓದುಗರ ಮೆಚ್ಚುಗೆಯೇ ಪ್ರಶಸ್ತಿ, ಪುರಸ್ಕಾರಗಳೆಂದು ತಿಳಿದಿದ್ದವರು ತೇಜಸ್ವಿ. ಆದರೂ ತೇಜಸ್ವಿ ಅವರ ಸಾಹಿತ್ಯ ಕೃತಿಯನ್ನು ಮೆಚ್ಚಿರುವ ಕರ್ನಾಟಕ ಜನತೆ, ಸಂಘ-ಸಂಸ್ಥೆಗಳು, ರಾಜ್ಯ ಹಾಗೂ ರಾಷ್ಟ್ರ ಸರ್ಕಾರಗಳು, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳು ಎಲ್ಲ ಬಗೆಯ ಅತ್ಯುನ್ನತ ಗೌರವ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಇವರ ‘ಅಬಚೂರಿನ ಪೋಸ್ಟಾಫೀಸು”, ”ತಬರನ ಕಥೆ”, ”ಕುಬಿ ಮತ್ತು ಇಯಾಲ” ಕಥೆಗಳನ್ನು ಆಧರಿಸಿ ನಿರ್ಮಿಸಿದ ಚಲನಚಿತ್ರಗಳ ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಾಗೂ ‘ಸ್ವರ್ಣಕಮಲ’ ಪುರಸ್ಕಾರಗಳನ್ನು ಪಡೆದಿವೆ. ಇವರ ಕೃತಿಗಳಲ್ಲಿ ಅನೇಕವನ್ನು ನಾಟಕಗಳಾಗಿ ರೂಪಾಂತರಿಸಿದ ಕೃತಿಗಳೂ ಜನಪ್ರಿಯಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಪುರಸ್ಕಾರಗಳನ್ನು ಏಳೆಂಟು ಬಾರಿ ಪಡೆದ ಏಕೈಕ ಲೇಖಕರು ಇವರು. ಕೇಂದ್ರ ಸಾಹಿತ್ಯ ಅಕಾಡೆಮಿ, ಭಾರತೀಯ ಭಾಷಾ ಪರಿಷತ್ತಿನ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರ ನೀಡುವ ”ಪಂಪ ಪ್ರಶಸ್ತಿ” ಇವರು ಪಡೆದಿರುವ ಅತ್ಯುನ್ನತ ಗೌರವಗಳು.
ಸ್ವಾತಂತ್ರ್ಯಾನಂತರದ ರಾಜಕೀಯ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ನೆಲೆಗಳನ್ನು ತುಂಬಾ ಎಚ್ಚರದಿಂದ ಗಮನಿಸುತ್ತಿರುವ ಅಪರೂಪದ ಚಿಂತಕರಾಗಿದ್ದ ತೇಜಸ್ವಿ ಅತ್ಯಂತ ಜನಪ್ರಿಯ ಹಾಗೂ ಮಹತ್ವದ ಲೇಖಕರು. ಸಮಷ್ಟಿ ಜೀವಿಗಳಲ್ಲಿನ ಸಮಾನತೆಯನ್ನು ಪ್ರತಿಪಾದಿಸುವ ಪರಿಸರ ಕೇಂದ್ರಿತ ಕಥನಗಳನ್ನು ಕಟ್ಟಿದ ಏಕೈಕ ಲೇಖಕರು. ಹಾಸ್ಯ ಬೆರೆತ ಕಥನಗಳು ಸಂಮೋಹನಶಕ್ತಿಯನ್ನು ಸಹಜವಾಗಿಯೇ ಪಡೆದಿವೆ. ಸಾಹಿತಿಯಾಗಿ, ಚಿಂತಕರಾಗಿ, ಛಾಯಾಚಿತ್ರಕಾರರಾಗಿ, ಪರಿಸರ ಕಾಳಜಿಯನ್ನು ಹೊಂದಿದ್ದ ತೇಜಸ್ವಿ ನಮ್ಮ ನಾಡಿನ ಸಂಪತ್ತು. ಸಮಾಜಕ್ಕೆ ಆಗಾಗ ತಲೆದೋರುವ ಸಾಮಾನ್ಯ ರೋಗಗಳಿಗೆ ಕನ್ನಡ ಜನತೆ ಅವರ ಚಿಕಿತ್ಸೆಗೆ ಎದುರು ನೋಡುತಿದ್ದರೆಂಬುದೇ ಸಾಕು ಅವರ ಪ್ರತಿಭೆಗೆ ಸಾಕ್ಷಿ. ತೇಜಸ್ವಿಯವರ ಕೃತಿಗಳ ಓದು ಮಾನವೀಯ ಬದುಕಿನ ಬಗೆಗೆ, ಪರಿಸರದ ಬಗೆಗೆ ಆಸಕ್ತಿ, ಪ್ರೀತಿ ಮತ್ತು ಕುತೂಹಲವನ್ನು ಬೋಧಿಸುತ್ತವೆ. ಪರಿಸರದ ಬಗಿಗಿನ ಲೋಭಕ್ಕಿಂತ ಪ್ರೀತಿಯ ಪಾಠಗಳನ್ನು, ಕಥೆಗಳನ್ನೂ ಹೇಳುತ್ತವೆ.
ಭೋಗಿಯೊ, ಯೋಗಿಯೊ? ಮುಕ್ತನೊ, ಬದ್ಧನೋ?
ರಾಮನೋ? ಕೃಷ್ಣನೊ? ಕ್ರೈಸ್ತನೊ? ಬುದ್ಧನೊ?
ಯಾರೋ ಬೇರೆಯ ಕವಿಯೋ ಸಿದ್ಧನೂ?
ಯಾರನು ಕಳುಹಿಸಿದನೊ ಕಾಣೆ!
ಯಾರವರು ಕಳುಹಿಸಿದನೊ ಕಾಣೆ!
ಯಾರವರು ಆಗದಕೇನಂತೆ?
ನಮ್ಮೊಲುಮೆಯ ಕುಡಿ ನಮಗೆಮ್ಮಂತೆ;
…………………….
ಮೂಡಲಿ ನಿನ್ನಿಂದೊಳ್ಪಿಗೆ ಕೋಡು;
ತಿಳಿಯಲಿ, ಹೊಳೆಯಲಿ, ನಮ್ಮಿನಾಡು;
ತೊಲಗಲಿ ಕತ್ತಲೆ, ಬತ್ತಲೆ; ಕೇಡು;
ಮಂಗಳನಾಗಯ್ ಲೋಕಕ್ಕೆ!
ದಾರ್ಶನಿಕರೂ, ಯುಗದ ಕವಿಯೂ, ಆದ ತಂದೆ ಕುವೆಂಪು ಅವರ ಪ್ರಾರ್ಥನೆ ”ಪೂರ್ಣಚಂದ್ರ ತೇಜಸ್ವಿ”ಯವರನ್ನು ಕರೆತಂದದ್ದು ನಾಡಿನ ಸಾರ್ಥಕತೆಗಳಲ್ಲಿ ಒಂದಾಗಿದೆ. ಕನ್ನಡ ನಾಡು ನುಡಿ ಸಂಸ್ಕೃತಿಗೆ ಕುವೆಂಪು ಈ ಮೂಲಕ ನೀಡಿದ ಮಹತ್ವ ಕೊಡುಗೆಗಳಲ್ಲಿ ಇದೂ ಒಂದಾಗಿದೆ. ಮಹಾಕವಿಯ ಅಭೀಪ್ಸೆಯನ್ನು ತೇಜಸ್ವಿಯವರು ತಮ್ಮ ಜೀವನ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಾಧನೆಗಳ ಮೂಲಕ ಅರ್ಥಪೂರ್ಣಗೊಳಿಸಿದ್ದಾರೆ. ಈ ಮೂಲಕ ಕರ್ನಾಟಕದ ಅಪರೂಪದ ಚಿಂತನೆಯ ಪ್ರತಿಭೆಗಳ ಸಾಲಿಗೆ ಸೇರಿದ್ದಾರೆ.
ಹೊಸ ದಿಗಂತದೆಡೆಗೆ
ಜಡಗೊಂಡ ಸಾಂಸ್ಕೃತಿಕ ಪರಿಸರ ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಸ್ಪಂದಿಸಲು ಅಶಕ್ತವಾದ ಸಂದರ್ಭದಲ್ಲಿ ತೇಜಸ್ವಿಯವರು ಹೊಸದಿಗಂತದೆಡೆಗೆ ಕರೆ ನೀಡಿದ್ದರು . ಅಂತಹುದೇ ಮತ್ತೊಂದು ಸಂದರ್ಭವನ್ನು ಇಪ್ಪತ್ತೊಂದನೇ ಶತಮಾನದ ಆರಂಭದಲ್ಲಿ. ಸಾಂಸ್ಕೃತಿಕ ಹಾಗೂ ರಾಜಕೀಯ ಪರಿಸರ ಎದುರಿಸುತ್ತಿದೆ. ಈಗ ನಮ್ಮೆದುರು ಬದಲಾವಣೆಗಳ ಮಹಾಪೂರವೇ ಹರಿಯುತ್ತಿದೆ. ಹೊಸ ನುಡಿಗಟ್ಟುಗಳು, ಹೊಸ ಉಕ್ತಿ ಭಂಗಿ, ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ನಾವೀಗ ಗಮನ ಹರಿಸಿ ಹೊಸ ದಿಗಂತಗಳತ್ತ ಅನ್ವೇಷಣೆಗೆ ಹೋರಾಡಬೇಕಾಗಾಗಿದೆ ಎಂದು ತಮ್ಮ ಕೊನೆಯ ಕೃತಿ ಮಾಯಾಲೋಕದಲ್ಲಿ ನುಡಿದಿದ್ದರು. ಜಗತ್ತಿನಲ್ಲಿ ಯಾವುದೂ ಜಡವಲ್ಲ ಎಂಬ ದಾರ್ಶನಿಕತೆಯೊಂದಿಗೆ ಅನೇಕ ಕ್ರಿಯಾ ಶೀಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು ಆದರೇ ಅವರ ಅಕಾಲ ಮರಣವಾಯಿತು. ಈ ಮರಣ ಬದಲಾವಣೆಗೆ ಅಗತ್ಯವಾದ ಹೊಸ ಸಂದರ್ಭ, ಸನ್ನಿವೇಶಗಳಿಗೆ ಮುಖಾಮುಖಿಯಾಗಲು (೫-೪-೨೦೦೭)
ಬೇಂದ್ರೆ ಅವರ ಕಾವ್ಯದಂತೆ
“ಸಪ್ಪ ಗಿನ ನುಡಿಗಾಗಿ ಉಪ್ಪು ತರಹೋಗಿಹರು
ರಸವಂತಿಯಿರುವ ಕಡೆಗೆ “……