ಕರ್ನಾಟಕದಲ್ಲಿ ಈಗ ಸಾಕ್ಷರತಾ ಆಂದೋಳನ ಪ್ರಾರಂಭವಾಗಿದೆ. ಕನ್ನಡ ನಾಡಿನ ಅನೇಕ ಯುವಕ ಯುವತಿಯರು ಈ ಪವಿತ್ರ ಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ಸಾಕ್ಷರತೆ ಅಕ್ಷರ ಕಲಿತ ಕನ್ನಡಿಗರಿಗೆ ಜಗತ್ತಿನ ಜ್ಞಾನ ಭಂಡಾರಕ್ಕೆ ತೆರೆದ ಬಾಗಿಲಾಗಬೇಕು. ಎಂದರೆ ಜಗತ್ತಿನ ಜ್ಞಾನ ದಿಗಂತಗಳ ಇತ್ತೇಚಿನ ವಿಸ್ತರಣೆ ಸಹ ಓದಲು ಕನ್ನಡದಲ್ಲಿ ದೊರೆಯುವಂತಾಗಬೇಕು. ಹೀಗಾಗದೆಹೋದರೆ ಅನರಕ್ಷತೆಗೂ ಸಾಕ್ಷರತೆಗೂ ವ್ಯತ್ಯಾಸವೇ ಇರುವುದಿಲ್ಲ. ಸಾಕ್ಷರತೆಯ ಉಪಯೋಗ ಮಾಡದ ಜನಸಮುದಾಯ ಬಹುಬೇಗ ಮತ್ತೆ ಅನಕ್ಷರತೆಗೇ ಮರಳುತ್ತಾರೆ. ಆದ್ದರಿಂದ ಸಾಕ್ಷರತೆಯ ಮುಂದಿನ ಹೆಜ್ಜೆ ನಮ್ಮ ಮುಂದಿರುವ ಅತಿ ದೊಡ್ಡ ಸವಾಲು.
ಈ ಸವಾಲನ್ನು ಒಂದಲ್ಲ ಒಂದು ದಿನ ನಾವು ಎದುರಿಸಬೇಕಾಗುತ್ತದೆ. ಎಂದು ನನಗೆ ಗೊತ್ತಿತ್ತು. ಜಗತ್ತಿನ ಜ್ಷಾನ ಕ್ಷೇತ್ರಗಳ ಇತ್ತೀಚಿನ ಸಾಧನೆಗಳನ್ನು ವರ್ಣಮಾಲೆಗೆ ಪರಿಚಯವಾದ ಮೊದಲನೆಯ ಅಥವಾ ಎರಡನೆಯ ಪೀಳಿಗೆಗೂ ಸಹ ತಿಳಿಯುವಂತೆ ಹೇಳುವ ಸವಾಲು.
ಗೆಳೆಯರೊಡನೆ, ಓರಗೆಯವರೊಡನೆ, ಮಕ್ಕಳೊಡನೆ ಮಾತಾಡುವಾಗೆಲ್ಲ ನಾನು ಓದಿ ತಿಳಿದುದನ್ನು ವಿವರಿಸುತ್ತಾ ಅರ್ಥೈಸುತ್ತಾ, ಪೂರ್ವ ಸಿದ್ಧತೆಗಳು ಯಾವೂ ಇಲ್ಲದವರಿಗೆ ಈ ಜ್ಙಾನವನ್ನು ತಲುಪಿಸುವ ಭಾಷೆ ಮತ್ತು ಕ್ಷಿಪ್ರ ವಿಧಾನಗಳಿಗೆ ಹುಡುಕಾಟ ನಡೆಸುತ್ತಲೇ ಇದ್ದೆ. ಅತಿ ಸೂಕ್ಷ್ಮ ಕಲ್ಪನೆಗಳನ್ನೂ ಆಲೋಚನೆಗಳನ್ನೂ ಜೀವನ ಸಂದರ್ಭದಲ್ಲಿ ಹೇಳಿದಾಗ ಅಥವಾ ಚರ್ಚಿಸಿದಾಗ ಚಕ್ಕನೆ ಅವುಗಳಲ್ಲಿ ಪ್ರಾಣಸಂಚಾರವಾಗಿ ಕೇಳಿದವರಿಗೆ ಕೂಡಲೆ ಹೃದ್ಗತವಾಗುವುದನ್ನು ನೋಡಿದ್ದೇನೆ. ಆದರೆ ಬರೆಯುವಾಗ ನಮಗೆ ಓದುಗರ ಜೀವನ ಸಂದರ್ಭಗಳ ಅರಿವಿನ ಅನುಕೂಲ ಇರುವುದಿಲ್ಲ. ಆದ್ದರಿಂದ ಈ ಜ್ಙಾನವನ್ನು ತಲುಪಿಸಲು ಅದು ರೂಪುಗೊಂಡಾಗಿನ ಚಾರಿತ್ರಿಕ ಮತ್ತು ಸಾಮಾಜಿಕ ಸಂದರ್ಭಗಳೊಂದಿಗೇ ಸೇರಿಸಿ ಕತೆ ಕಾದಂಬರಿಯಂತೆ ಹೇಳುವ ಪ್ರಯೋಗ ಮಾಡಿದ್ದೇನೆ.
ಇದರೊಡನೆ ಪತ್ರಿಕೆಗಳಿಗೆ ಬರೆಯಬೇಕಾಗಿ ಬಂದುದು ನನ್ನ ಬರವಣಿಗೆಯ ಮೇಲೆ ಪ್ರಭಾವ ಬೀರಿತು. ಅದನ್ನು ಕೊಂಡು ಓದುವ ನೂರಾರು ಬಗೆಯ ಜನಗಳನ್ನು ಅವರವರ ಅಬಿರುಚಿಗಳ ಮುಖಾಂತರವೆ ಹಿಡಿದು ಓದಿಸಿಕೊಂಡು ಹೋಗಬೇಕಾದ ಗದ್ಯವನ್ನು ನಾನು ರೂಪಿಸಬೇಕಾಯ್ತು. ಈ ದಿಕ್ಕಿನಲ್ಲಿ ನಾನು ಮಾಡಿದ ಪ್ರಯೋಗ ಮತ್ತು ಪ್ರಯತ್ನಗಳಲ್ಲಿ ‘ಮಿಸ್ಸಿಂಗ್ ಲಿಂಕ್’ ಕೃತಿ ಒಂದು.
ಕನ್ನಡದಲ್ಲಿ ಏನೂ ಇಲ್ಲ, ಇರುವುದೆಲ್ಲ ಬೂಸಾ ಎನ್ನುವವರೂ, ಕನ್ನಡದಲ್ಲಿ ಸರ್ವಸಮಸ್ತವೂ ಇದೆ ಎನ್ನುವವರೂ ಕೊಂಚ ವಿವೇಕ ತೋರಿ ಮೌನ ವಹಿಸಿದರೆ ನಮ್ಮ ಮುಂದಿರುವ ಅಗಾಧ ರಚನಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತುಂಬಾ ಅನುಕೂಲವಾಗುತ್ತದೆ. ಕನ್ನಡ ಭಾಷೆಯ ಏಳಿಗೆಗೂ ಅಪಾರ ಸಹಾಯವಾಗುತ್ತದೆ.
– ಕೆ ಪಿ ಪೂರ್ಣಚಂದ್ರ ತೇಜಸ್ವಿ.