ಮಾಯೆಯ ಮುಖಗಳು
ಬಹುಶಃ ಇಂಥದ್ದೊಂದು ಘಟನೆ ಯಾವೊಬ್ಬ ಲೇಖಕನ ಜೀವನದಲ್ಲಿ ನಡೆದಿರಲಿಕ್ಕಿಲ್ಲ. ತಾನೇ ಸೃಷ್ಟಿಸಿದ ಪಾತ್ರಗಳು, ಬಂದು ಲೇಖಕನ ಜೊತೆ ಪಾತ್ರದಲ್ಲಿನ ತನ್ನ ವ್ಯಕ್ತಿತ್ವದ ಸಮರ್ಥನೆಯ ಕುರಿತು ಜಗಳವಾಡುವುದು. ಇಂಥದ್ದೊಂದು ಅಪರೂಪದ ಘಟನೆ ನಡೆದಿದ್ದು, ತೇಜಸ್ವಿ ಹಾಗೂ ಬಿರಿಯಾನಿ ಕರಿಯಪ್ಪನ ನಡುವೆ. ತೇಜಸ್ವಿ ಬರೆದ ಕರ್ವಾಲೋ ಕಾದಂಬರಿಯಲ್ಲಿ ಪಾತ್ರವಾಗಿ ಬರುವ ಬಿರಿಯಾನಿ ಕರಿಯಪ್ಪ ಹಾಗೂ ಹಾವು ಗೊಲ್ಲರ ಎಂಕ್ಟ ಇಬ್ಬರು ನಿಜ ಜೀವನದಲ್ಲಿ ತೇಜಸ್ವಿಗೆ ಪರಿಚಿತ ವ್ಯಕ್ತಿಗಳು. ಕಾದಂಬರಿಯಲ್ಲಿ ಇವರ ಪಾತ್ರ ಪೋಷಣೆಯ ಕುರಿತಾಗಿ ಹಾಗೂ ಕೆಲ ಸನ್ನಿವೇಶಗಳನ್ನು ಕುರಿತು ಆಕ್ಷೇಪವೆತ್ತಿ, ತೇಜಸ್ವಿಯನ್ನು ಈ ಬಗ್ಗೆ ಪ್ರಶ್ನಿಸಲು ಅವರನ್ನು ಹುಡುಕಿಕೊಂಡು ಬಂದು ಪ್ರಶ್ನಿಸುತ್ತಾರೆ.
ತೇಜಸ್ವಿ ರಚಿಸಿದ ಪಾತ್ರಗಳು ಮೂಡಿಗೆರೆಗೆ ಮಾತ್ರ ಸೀಮಿತವಾಗಿರದೆ ನಮ್ಮ ನಮ್ಮ ಊರಲ್ಲೇ ಅಂಥ ವ್ಯಕ್ತಿಗಳನ್ನು ಕಾಣುವಂಥ ಮನಸ್ಥಿತಿಯನ್ನು ನಮ್ಮಲ್ಲಿ ಜಾಗೃತಗೊಳಿಸುತ್ತವೆ.
ತೇಜಸ್ವಿ ಸೃಷ್ಟಿಸಿದ ಪಾತ್ರಗಳು ಯಾವ ಮಟ್ಟಿಗೆ ನಮ್ಮನ್ನೆಲ್ಲ ಪ್ರಭಾವಿಸಿದೆಯೆಂದರೆ ವಾಸ್ತವವಾಗಿ ನಾವೆಲ್ಲರೂ ನಮ್ಮನಮ್ಮ ಊರಲ್ಲೇ ಇದ್ದರೂ ಮಾನಸಿಕವಾಗಿ ಮೂಡಿಗೆರೆಯಲ್ಲೇ ಬದುಕುತ್ತಿರುತ್ತೇವೆ. ಯಾರಾದರೂ ಕೊಂಚ ಪೆಂಗು ಪೆಂಗಾಗಿ ಆಡಿದರೆ ಅವರಲ್ಲಿ ಮಂದಣ್ಣನನ್ನು ಕಾಣುತ್ತಾ , ಕಂಡ ಕಂಡ ಪಕ್ಷಿ ಕೀಟಗಳ ಬಗ್ಗೆ ಬೆರಗು ತೋರುತ್ತಾ , ವಿಸ್ಮಯಗಳಿಗೆ ಕಣ್ಣರಳಿಸುತ್ತ ಕುಳಿತಿರುತ್ತೇವೆ. ತೇಜಸ್ವಿಯವರ ಕೃತಿಗಳ ಪಾತ್ರಗಳೆಲ್ಲವೂ ಕೊಂಚ ಅತೀ ಎನಿಸುವಷ್ಟೇ ವಾಸ್ತವದಲ್ಲಿ ಬದುಕುತ್ತಿರುತ್ತವೆ. ಹಾರುವ ಓತಿ ಕೈತಪ್ಪಿದರೂ ಮತ್ತೆ ಸಿಗುತ್ತದೆ ಎಂಬ ಆಶಾವಾದವನ್ನು ಇಟ್ಟುಕೊಂಡಿರುತ್ತವೆ . ಆದರೆ ನಾವು ಹಾಗಲ್ಲ. ‘ಛೇ ಮಿಸ್ಸಾಯ್ತಲ್ಲ ‘ಅಂತ ತಲೆ ಮೇಲೆ ಕೈ ಹೊತ್ತು ಕೂರುತ್ತೇವೆ. ಜುಗಾರಿ ಕ್ರಾಸಿನ ರತ್ನಮೂಲದ ವಿವರವಿರುವ ಕಡತದ ಬಗ್ಗೆ ಕನಸು ಕಾಣುತ್ತೇವೆ. ಪ್ಯಾರನ ಕನ್ನಡ ಮಾತನಾಡುವ ಶೈಲಿ, ಮಾರನ ಅಸಾಧಾರಣ ಬುದ್ಧಿವಂತಿಕೆ , ಕಿವಿಯ ಚುರುಕುತನ ಎಲ್ಲವನ್ನೂ ಚಿತ್ರಿಸಿ, ಅತೀ ಸಾಮಾನ್ಯ ವಿಷಯವನ್ನೂ ಬೆರಗಿನಿಂದ ಗಮನಿಸುವಂತೆ ಮಾಡಿದ್ದು ತೇಜಸ್ವಿ.